ಬಾಗಲಕೋಟೆ: ರಬಕವಿ-ಬನಹಟ್ಟಿ ಸಾರಿಗೆ ಸಂಸ್ಥೆಯ ಬಸ್‍ವೊಂದನ್ನು ನ್ಯಾಯಾಲಯ ದಿಢೀರನೆ ಜಪ್ತಿ ಮಾಡಿದೆ.
ಕಳೆದ 2009 ರಲ್ಲಿ ತೇರದಾಳ ಪಟ್ಟಣದ ಹೊಸೂರಿಗೆ ಆಗಮಿಸುತ್ತಿದ್ದ ಬೈಕ್ ಸವಾರನೊಬ್ಬ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಹೊಸೂರಿನ ಸಮೀಪ ಗದಗ ಘಟಕಕ್ಕೆ ಸೇರಿದ ಬಸ್‍ವೊಂದಕ್ಕೆ ಸಿಲುಕಿ ಸಾವನ್ನಪ್ಪಿದ್ದ. ಯಾಸೀನ್ ಹುಡೇದಮನಿ(35) ಅಪಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದ ವ್ಯಕ್ತಿ. ಈ ಕುರಿತು ಜಮಖಂಡಿ ನ್ಯಾಯಾಲಯದಲ್ಲಿ ಮೃತನ ಪತ್ನಿ ರಜೀಯಾ ದುರು ದಾಖಲು ಮಾಡಿದ್ದರು.
ಇದಕ್ಕೆ ಸಂಬಂಧ ಸುದೀರ್ಘ ವಾದ-ವಿವಾದ ನಡೆದ ಬಳಿಕ 2013 ರಲ್ಲಿ ಜಮಖಂಡಿ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಆದೇಶ ನೀಡಿ, ಮೃತರ ಕುಟುಂಬಕ್ಕೆ 8.90 ಲಕ್ಷ ಪರಿಹಾರ ನೀಡಬೇಕೆಂದು ತಿಳಿಸಿದ್ದರು.
ಈ ಸಂಬಂಧ ಈಗಾಗಲೇ 7 ಲಕ್ಷ ರೂ. ಪರಿಹಾರವನ್ನು ಸಾರಿಗೆ ಇಲಾಖೆ ನೀಡಿತ್ತು. ಇನ್ನುಳಿದ 1.9 ಲಕ್ಷ ಪರಿಹಾರವನ್ನು ಇಲ್ಲಿಯವರೆಗೂ ಮೃತರ ಕುಟುಂಬಕ್ಕೆ ನೀಡದ ಕಾರಣ ಇದಕ್ಕೆ ತಗಲುವ ಬಡ್ಡಿ ಸಹಿತ ಒಟ್ಟು 3.5 ಲಕ್ಷ ರೂ.ಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಅದಾಗ್ಯು ಹಣ ನೀಡದ ಕಾರಣ ಗದಗ ಘಟಕದ ಕೆಎ-26 ಎಫ್-971 ಬಸ್‍ನ್ನು ತಡೆ ಹಿಡಿದ ನ್ಯಾಯಾಲಯ ಬಸ್ ಜಪ್ತಿ ಮಾಡಿದೆ.