ಬಾಗಲಕೋಟೆ: ನಗರದ ಸ್ವಕುಳಸಾಳಿ ನೇಕಾರ ಸಮಾಜದ ಗೌರವಾಧ್ಯಕ್ಷರಾಗಿದ್ದ ಶಿವಾನಂದ ಏಕಬೋಟೆ ಹಾಗೂ ಅವರ ಪತ್ನಿ ಸುಮಿತ್ರಾಬಾಯಿ ಶಿವಾನಂದ ಏಕಬೋಟೆ ದಂಪತಿ ಒಂದೇ ವಾರದಲ್ಲಿ ಕೋವಿಡ್ ಸೋಂಕು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ದಂಪತಿ ಕಳೆದ ತಿಂಗಳು ಬೆಂಗಳೂರಿನಲ್ಲಿ ವಾಸವಿರುವ ಪುತ್ರನ ಬಳಿ ತೆರಳಿದ್ದರು. ಈ ವೇಳೆ ಕೊರೊನಾ 2 ನೇ ಅಲೆ ಕುಟುಂಬದ ಸದಸ್ಯರೆಲ್ಲರಿಗೂ ಬಾಧಿಸಿದೆ. ಆಸ್ಪತ್ರೆಗೆ ದಂಪತಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ರಯೋಜನವಾಗಲಿಲ್ಲ. ಪರಿಣಾಮ, ಮಾರಕ ರೋಗದ ಜೊತೆ ಹೋರಾಟ ನಡೆಸಲಾಗದೆ ಒಂದೇ ವಾರದಲ್ಲಿ ಎರಡು ಜೀವಗಳು ಬಾರದ ಲೋಕಕ್ಕೆ ಪಯಣಿಸಿವೆ.
ಬಾಗಲಕೋಟೆಯಲ್ಲಿ 153 ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಹೊಸದಾಗಿ 153 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. 29 ಜನ ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14,998 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 14,274 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ ಬಾಗಲಕೋಟೆ 56, ಬಾದಾಮಿ 18, ಜಮಖಂಡಿ 31, ಬಾದಾಮಿ, ಹುನಗುಂದ ತಲಾ 20, ಮುಧೋಳ 19, ಬೀಳಗಿಯ 7 ಜನರಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗುತ್ತಿದ್ದ 970 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 5,15,606 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 4,99,229 ನೆಗೆಟಿವ್ ಪ್ರಕರಣ ಮತ್ತು 139 ಮೃತ ಪ್ರಕರಣ ವರದಿಯಾಗಿದೆ.
ಇನ್ನು 585 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು 462 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೈಟ್ ಕರ್ಫ್ಯೂ
ಬುಧವಾರ ರಾತ್ರಿಯಿಂದಲೇ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ. ಶನಿವಾರ, ರವಿವಾರ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿರುತ್ತದೆ.