ಬಾಗಲಕೋಟೆ: ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆಗೆ ಚಾಲನೆ ಸೇರಿದಂತೆ ಇತರ ಸುದ್ದಿಗಳು ನೋಟ ಇಲ್ಲಿದೆ.
ಕೊರೊನಾ ಲಸಿಕೆಗೆ ಚಾಲನೆ ನೀಡಿದ ಸಂಸದ
ನಿನ್ನೆ ಸಂಸದ ಪಿ.ಸಿ.ಗದ್ದಿಗೌಡರ ಜಿ.ಪಂ ನೂತನ ಸಭಾ ಭವನದಲ್ಲಿ ಕೊರೊನಾ ಲಸಿಕೆಗೆ ಚಾಲನೆ ನೀಡಿದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ರೋಗ ಹತೋಟಿಗೆ ಬಂದಿದೆ. ದೇಶದ ಪ್ರಧಾನಿ ಸೇರಿದಂತೆ ಪ್ರಮುಖರು ಲಸಿಕೆ ಹಾಕಿಸಿಕೊಂಡು ಕೊರೊನಾ ರೋಗ ಹೋಗಲಾಡಿಸುವುದಕ್ಕೆ ಮುಂದಾಗಿದ್ದಾರೆ. ಯಾವುದೇ ಭಯ ಇಲ್ಲದೇ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ಬಂಜಾರ ಸಂಘಟನಾ ಸಮಿತಿಯ ಜಿಲ್ಲಾಘಟಕದ ಉದ್ಘಾಟನೆ
ನವನಗರದ ಸೆಕ್ಟರ್ ನಂಬರ್ 29ರ ಕೊರಮ್ಮ ದೇವಿ ದೇವಸ್ಥಾನದಲ್ಲಿ ಭಾರತೀಯ ಬಂಜಾರ ಸಂಘಟನಾ ಸಮಿತಿಯ ಜಿಲ್ಲಾಘಟಕದ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ನ್ಯಾಯವಾದಿ ರಾಜು ಲಮಾಣಿ ಮಾತನಾಡಿ, ಸಮಾಜದ ಸಂಘಟನೆಗಳು ಒಗ್ಗಟ್ಟಿನಿಂದ ಕೆಲಸ ಮಾಡುವುದರೊಂದಿಗೆ ಸಮಾಜದ ಏಳ್ಗೆಯನ್ನು ಬಯಸಬೇಕು. ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಪಡೆಯಲು ನಿರಂತರ ಹೋರಾಟ ಮಾಡುವ ಅನಿವಾರ್ಯತೆ ಇದೆ. ಸಮಾಜಕ್ಕೆ ಸೇವಾಲಾಲ ಮಹಾರಾಜರ ಕೊಡುಗೆ ಅಪಾರವಾಗಿದೆ. ಅದೇ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದರು.
ತೆರೆದ ಹೃದಯ ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ
ಬಿ.ವಿ.ವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಹೃದಯರೋಗ ವಿಭಾಗದಲ್ಲಿ 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಿದ ಅತ್ಯಾಧುನಿಕ ತೆರೆದ ಹೃದಯ ಶಸ್ತ್ರಚಿಕಿತ್ಸಾ ಘಟಕ ಸಾರ್ವಜನಿಕರ ಸೇವೆಗಾಗಿ ಉದ್ಘಾಟನೆಗೊಂಡಿತು. ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ ಈ ತೆರೆದ ಹೃದಯದ ಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟಿಸಿ ಈ ಭಾಗದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುತ್ತಿರುವ ಬಿ.ವಿ.ವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಕಾರ್ಯ ಅಭಿನಂದನಾರ್ಹ ಎಂದು ಶ್ಲಾಘಿಸಿದರು.