ಬಾಗಲಕೋಟೆ: ಕೊರೊನಾ ನಿಯಂತ್ರಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜತೆ ವಿಡಿಯೋ ಸಂವಾದ ನಡೆಸಿದರು.
ಇದಕ್ಕೂ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಲಾಕ್ ಫಂಗಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಗೆ ಅಶುದ್ಧ ನೀರಿನಿಂದ ತಯಾರಿಸಿರುವ ಆಕ್ಸಿಜನ್ ಪೂರೈಕೆಯಾಗ್ತಿದೆ, ಇದಕ್ಕೆ ತಜ್ಞರಿಂದ ಪರಿಶೀಲನೆ ಮಾಡುವ ವಿಚಾರವಾಗಿ ಮಾತನಾಡಿ, ಅಷ್ಟು ವಿಜ್ಞಾನಿ ನಾನಲ್ಲ, ನಾನೊಬ್ಬ ರಾಜ್ಯ ಮಂತ್ರಿ ನೀವು ಹೇಳಿದ್ದನ್ನ ಗಮನಕ್ಕೆ ತರ್ತಿನಿ, ಅಧಿಕಾರಿಗಳೊಂದಿಗೆ ಚರ್ಚೆ ಮಾಡ್ತೀನಿ. ಅದರಲ್ಲೇನಾದ್ರೂ ತಪ್ಪು ಕಂಡುಬಂದರೆ ಅವರಿಗೂ ಹೇಳ್ತೀನಿ ಎಂದರು.
ಸಂಪೂರ್ಣ ಲಾಕ್ಡೌನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಲ್ಲರು ಕೂಡಿ ಲಾಕ್ಡೌನ್ ಮಾಡುವುದು ಒಳ್ಳೆಯದು ಅನ್ನೋದು ನನ್ನ ಅಭಿಪ್ರಾಯ. ಸಂಪೂರ್ಣ ಲಾಕ್ಡೌನ್ ಮಾಡಿದ್ರೆ ಸೋಂಕು ನಿಲ್ಲುತ್ತದೆ ಎಂದು ಚರ್ಚೆ ಆಗುತ್ತದೆ. ದಯಮಾಡಿ ಯಾರು ಮನೆ ಬಿಟ್ಟು ಹೊರಗೆ ಹೋಗಬೇಡಿ, ಮನೆಯಲ್ಲೆ ಇರೀ ಎಲ್ಲವೂ ಸರ್ಕಾರ ಮಾಡಲಿಕ್ಕೆ ಆಗಲ್ಲ ಜನತೆ ಕೂಡಾ ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.
ನಾನು ಒಬ್ಬ ಸಚಿವನಾಗಿ ಎಲ್ಲ ಸಚಿವರ ಒಮ್ಮತಕ್ಕೆ ನಾನು ಬದ್ಧನಾಗಿರುತ್ತೇನೆ ಲಾಕ್ಡೌನ್ ಮುಂದುವರೆಸಬೇಕು, ಸಾದ್ಯವಾದರೆ ಮೇ 31ರ ವರೆಗೆ ಮುಂದುವರೆಸಬೇಕು ಎಂದು ಉಮೇಶ ಕತ್ತಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.