ಬಾಗಲಕೋಟೆ: ಕೊರೊನಾ ಎರಡನೇ ಅಲೆ, ಖಾಸಗಿ ಆಸ್ಪತ್ರೆಗಳಿಗೆ, ವೈದ್ಯರಿಗೆ ಹೆಚ್ಚು ಲಾಭದಾಯಕವಾಗುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಒಂದು ದಿನಕ್ಕೆ 8-10 ಸಾವಿರ ರೂ. ಚಾರ್ಜ್ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಬಡವರಿಗೆ, ಮಧ್ಯಮ ವರ್ಗದವರಿಗೆ ಸೂಕ್ತ ಚಿಕಿತ್ಸೆ ಇಲ್ಲದೇ ಪರದಾಡುವಂತಾಗಿದೆ. ಬಾಗಲಕೋಟೆ ನಗರವು ಈಗ ಆಸ್ಪತ್ರೆಗಳ ನಗರವಾಗಿ ನೂರಾರು ಖಾಸಗಿ ಆಸ್ಪತ್ರೆಗಳು ಹುಟ್ಟಿಕೊಂಡಿದ್ದು, ಕೋವಿಡ್ ಚಿಕಿತ್ಸೆ ನೀಡುವ ನೆಪದಲ್ಲಿ ರೋಗಿಗಳಿಂದ ಹಗಲು ದರೋಡೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವುದು ಸಾಮಾನ್ಯವಾಗಿದೆ.
ಸರ್ಕಾರದ ಆದೇಶದಂತೆ ಕೋವಿಡ್ ಚಿಕಿತ್ಸೆಗೆ ಇಂತಿಷ್ಟು ದರ ನಿಗದಿಗೊಳಿಸುವಂತೆ ಸೂಚನೆ ನೀಡಿದರು, ಇತರ ವೆಚ್ಚ ಎಂದು ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತ ಇದ್ದರೂ, ಸರಿಯಾದ ಚಿಕಿತ್ಸೆ ಸಿಗುವುದಿಲ್ಲ, ನುರಿತ ವೈದ್ಯರು ಇರುವುದಿಲ್ಲ ಎಂಬ ಕಾರಣದಿಂದ ಜೀವ ಉಳಿದರೆ ಸಾಕು ಎನ್ನುವ ಕಾರಣದಿಂದ ಸಾಲಶೂಲ ಮಾಡಿ, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಆದರೆ, ಕೋವಿಡ್ ಮಾರ್ಗ ಸೂಚಿ ಇದ್ದರೂ, ವಿನಾಕಾರಣ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತದೆ.
ರೆಮ್ಡೆಸಿವಿರ್ ಔಷಧ ಮಾರಾಟವು ಸಹ ಕಾಳ ಸಂತೆಯಲ್ಲಿ ಸಿಗುತ್ತಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರೆತೆ ಇಲ್ಲವಾದರೂ, ಆಕ್ಸಿಜನ್ ಬೆಡ್ ಸಿಗುತ್ತಿಲ್ಲ. ಇದರಿಂದ ಸಾವು ನೋವು ಹೆಚ್ಚಾಗುತ್ತಿದೆ. ಲಕ್ಷ ಲಕ್ಷ ಹಣವನ್ನು ಹಿಡಿದುಕೊಂಡು ಆಸ್ಪತ್ರೆ ಮುಂದೆ ನಿಂತರೂ, ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಬೆಡ್ ಗಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮೂಲಕ, ಶಾಸಕ ವೀರಣ್ಣ ಚರಂತಿಮಠ ಅವರ ಮೂಲಕ ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಮೂಲಕ ಒತ್ತಡ ಹಾಕಲಾಗುತ್ತದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಎಕ್ಸರೆ ಉಚಿತವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 3-4 ಸಾವಿರ ರೂ. ವರೆಗೆ ಹಣ ನೀಡಬೇಕಾಗುತ್ತದೆ. ಆಂಧ್ರ ಪ್ರದೇಶದ ಹಾಗೂ ಕೇರಳ ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಅಲ್ಲಿನ ಸರ್ಕಾರ ಆದೇಶ ಮಾಡಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೇ ಸರ್ಕಾರ ಜಾರಿಗೆ ಮಾಡಬೇಕಿದೆ. ಇಲ್ಲವಾದಲ್ಲಿ ಬಡವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗದೇ ಸಾಯುವಂತಾಗುತ್ತದೆ.
ಕೊರೊನಾದಿಂದ ಕೆಲ ಸಂಘ ಸಂಸ್ಥೆಗಳು ದಿವಾಳಿ ಆದವು, ಬಡವರಿಗೆ, ಮಧ್ಯಮ ವರ್ಗದವರಿಗೆ ಉದ್ಯೋಗ ಇಲ್ಲದೇ ತತ್ತರಗೊಂಡಿದ್ದಾರೆ. ಕೂಲಿ ಕಾರ್ಮಿರು ಬೀದಿ ಪಾಲಾಗಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳು ಮಾತ್ರ ಕೊರೊನಾದಿಂದ ಆದಾಯ ಮಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತ ವಾಗಿದ್ದರೂ, ಅಲ್ಲಿಯೂ ಸಹ ಕೆಲವೊಂದು ವಿಷಯದಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ಹಲವೆಡೆ ಸಾರ್ವಜನಿಕರು ಆರೋಪಿಸಿದ್ದಾರೆ.