ಬಾಗಲಕೋಟೆ: ನಗರದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ನವನಗರದ ತಹಶಿಲ್ದಾರ್ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ತೊಂದರೆ ಆಗಿದೆ. ಆದರೂ ಸರ್ಕಾರ ಪರಿಹಾರ ಧನ ನೀಡಲು ಮೀನಾಮೇಷ ಎಣಿಸುತ್ತಿದೆ. ಈ ಕುರಿತು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ನಾಯಕರಿಗೆ ಐಟಿ ಹಾಗೂ ಇಡಿ ಮೂಲಕ ಬೆದರಿಸುವ ತಂತ್ರ ಮಾಡುತ್ತಿದೆ. ಇಂತಹ ಬೆದರಿಕೆಗೆ ಅಂಜುವುದಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯರು ತಮ್ಮ ಬಲಿದಾನ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೋರಾಟ ಮಾಡಿದ್ದರು. ದೇಶವು ಆರ್ಥಿಕ ಸಂಕಷ್ಟದಿಂದ ತತ್ತರಗೊಂಡಿದ್ದು, ಮೋದಿ ಅವರು ಆ ಬಗ್ಗೆ ಮೊದಲು ವಿಚಾರ ಮಾಡಲಿ ಎಂದು ಒತ್ತಾಯಿಸಿದರು.