ಬಾಗಲಕೋಟೆ: ಜನವರಿ 15 ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದ ಎಸ್ ಆರ್ ಕೆ ಶುಗರ್ ಕಾರ್ಖಾನೆ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ನನ್ನ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಜನವರಿಯಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಜನ ವಿರೋಧಿ ನೀತಿಗಳ ಕುರಿತು ಮತದಾರರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗುವುದು ಎಂದರು.
224 ಕ್ಷೇತ್ರದಲ್ಲಿ ಒಮ್ಮೆಲೇ ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬೇರೆ ಬೇರೆ ತಂಡ ಮಾಡಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಚುನಾವಣೆ ಸಮಯದಲ್ಲಿ ಡಿ ಕೆ ಶಿವಕುಮಾರ್ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಾರೆ. ನಾನು ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಹೈಕಮಾಂಡ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡುತ್ತಾರೋ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಅದು ಬಾದಾಮಿ ಆಗಲಿ, ಕೋಲಾರ ಆಗಲಿ, ವರುಣ ಅಥವಾ ಯಾವುದೇ ಕ್ಷೇತ್ರ ವಾಗಲಿ ಎಂದು ತಿಳಿಸಿದರು.
ಇದನ್ನೂ ಓದಿ; ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಕೂಗುತ್ತಿವೆ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಇದೇ ಸಮಯದಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಮಾತನಾಡಿ, ಗಡಿ ವಿಚಾರ ವಿವಾದವೇ ಅಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ದೆಹಲಿಯಲ್ಲಿ ಬಿಜೆಪಿ ಸರ್ಕಾರವಿದೆ. ರಾಜಕಾರಣಕ್ಕೋಸ್ಕರ ಮಹಾರಾಷ್ಟ್ರದವರು ಯಾವಾಗಲೂ ಕ್ಯಾತೆ ತೆಗೆಯುತ್ತಾರೆ ಎಂದರು.
ಇದನ್ನೂ ಓದಿ; ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು: ಸಿದ್ದರಾಮಯ್ಯ
ಮಹಾಜನ ವರದಿ ಪ್ರಕಾರ, 1962ರಲ್ಲಿ ಇದು ಇತ್ಯರ್ಥ ಆಗಿದೆ. ಬೆಳಗಾವಿ ಕರ್ನಾಟಕದ್ದು, ಒಂದಿಂಚು ಜಾಗವನ್ನು ಕೂಡ ಬಿಟ್ಟು ಕೊಡುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಮಿತ್ ಶಾ, ನರೇಂದ್ರ ಮೋದಿ ಯಾರೇ ಹೇಳಿದ್ರು ಬಿಟ್ಟುಕೊಡುವ ಮಾತಿಲ್ಲ ಎಂದ ಸಿದ್ದರಾಮಯ್ಯನವರು, ಇಂತಹ ವಿಚಾರದಲ್ಲಿ, ಸರ್ಕಾರ ವೀಕ್ ಆಗಬಾರದು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪುಂಡಾಟಿಕೆ ಮಾಡಿದ್ರೆ ಕ್ರಮ ತೆಗೆದುಕೊಳ್ಳಬೇಕು, ಮಹಾರಾಷ್ಟ್ರದವರ ಉದ್ಧಟತನಕ್ಕೆ ಹೆದರಲು ಆಗುವುದಿಲ್ಲ. ಸಮಸ್ಯೆ ಕ್ರಿಯೇಟ್ ಮಾಡಬಾರದು, ನಮ್ಮ ಬೊಮ್ಮಾಯಿ ವೀಕ್ ಲೀಡರ್ ಆಗಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ; ಹುನಗುಂದಕ್ಕೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ.. ಡಿಕೆಶಿ ಗೈರು