ಬಾಗಲಕೋಟೆ: ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳಿಂದ ರಾಜೀನಾಮೆಗೆ ನಿರ್ಧಾರ ಮಾಡುವ ಮೂಲಕ ಆಡಳಿತ ನಡೆಸುತ್ತಿರುವ ಸ್ವಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸಭೆ ನಡೆಸಿ, ರಾಜೀನಾಮೆ ನೀಡುವ ತೀರ್ಮಾನ ಮಾಡಿಕೊಂಡಿದ್ದಾರೆ.
ಯುವ ಮೋರ್ಚಾದಿಂದ ಸಭೆ ನಡೆಸಿದ ಬಳಿಕ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಯುವ ಮೊರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯ ಯುವ ಮೋರ್ಚಾದ 12 ಮಂಡಳಗಳ ಪದಾಧಿಕಾರಿಗಳು, ಕಾರ್ಯಕರ್ತರಿಂದ ರಾಜೀನಾಮೆ ನಿರ್ಧಾರಕ್ಕೆ ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರ ಇದ್ದರೂ ಸಹ ಹಿಂದೂಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಭದ್ರತೆ ಇಲ್ಲದೇ ಇರುವುದು ವಿಷಾದಕರವೆಂದು ಅವರು ಅಸಮಾಧಾನ ಹೂರ ಹಾಕಿದ್ದಾರೆ.
ಪ್ರವೀಣ ಹತ್ಯೆಯಿಂದ ನಮಗೆ ತೀವ್ರ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರ ಸೂಕ್ತ ಕ್ರಮವಾಗಬೇಕು. ಸಿಎಂ ಮತ್ತು ಗೃಹ ಸಚಿವರು ಸೇರಿದಂತೆ ಸಂಬಂಧಪಟ್ಟವರೆಲ್ಲರೂ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳುವವರೆಗೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ತೀರ್ಮಾನ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.