ಬಾಗಲಕೋಟೆ: ಜಾತ್ರೆ ಎಂದಾಗ ಹಣ್ಣು, ಹಂಪಲುಗಳನ್ನು ದೇವರಿಗೆ ಅರ್ಪಿಸುವುದುಂಟು. ಆದರೆ ತೆಂಗಿನಕಾಯಿ ಎಸೆಯುವ ಮೂಲಕ ಉತ್ತರ ಕರ್ನಾಟಕದಲ್ಲೇ ಗಮನಸೆಳೆಯುವಂತಹ ಜಾತ್ರೆಯೊಂದು ಸುಮಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಆಂಜನೇಯ ದೇವಾಲಯದ ಜಾತ್ರಾ ಮಹೋತ್ಸವವು ತನ್ನದೇ ಆದ ಇತಿಹಾಸ ಹೊಂದಿದೆ.
ಕಾರ್ತಿಕ ಮಾಸದ ಪ್ರತಿ ಶನಿವಾರದಂದು ಇಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಬೇಡಿಕೊಂಡ ಇಷ್ಟಾರ್ಥಗಳನ್ನು ದೇವರು ಈಡೇರಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ, ಇಂತಿಷ್ಟು ತೆಂಗಿನಕಾಯಿ ಎಸೆಯುವುದಾಗಿ ಹರಕೆ ಹೊರುತ್ತಾರೆ.
ತಮ್ಮ ಹರಕೆ ಫಲಿಸಿದ ಬಳಿಕ ಭಕ್ತರು ಜಾತ್ರೆಗೆ ಆಗಮಿಸಿ, ತೆಂಗಿನಕಾಯಿಯನ್ನು ಎಸೆದು ದೇವರ ಆಶೀರ್ವಾದ ಪಡೆಯುತ್ತಾರೆ. ಐದರಿಂದ ಪ್ರಾರಂಭವಾಗಿ ಐದು ಸಾವಿರದವರೆಗೂ ಜನರು ತೆಂಗಿನ ಕಾಯಿ ಎಸೆಯುವುದುಂಟು. ಅಲ್ಲದೇ ಬೇರೆ ಬೇರೆ ಕಡೆ ಕೆಲಸದ ನಿಮಿತ್ತ ನೆಲೆಸಿರುವ ಜನರು ಜಾತ್ರೆಯ ಸಮಯದಲ್ಲಿ ಊರಿಗೆ ಆಗಮಿಸಿ ಗೋಪುರಕ್ಕೆ ತೆಂಗಿನಕಾಯಿ ತೂರುತ್ತಾರೆ.
ಜಾತ್ರೆಯ ಹಿನ್ನೆಲೆಯಲ್ಲಿ ಸಂಜೆಯ ಸಮಯದಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ದೇವಾಲಯಕ್ಕೆ ಐದು ಸುತ್ತು ಪ್ರದಕ್ಷಿಣೆ ಬಂದು ಭಕ್ತಾದಿಗಳು ತೆಂಗಿನಕಾಯಿಯನ್ನು ಎಸೆಯುವುದು ವಾಡಿಕೆ. ಹೀಗೆ ಎಸೆಯುವಾಗ ಕೆಲವರು ಕಾಯಿಯನ್ನು ಹಿಡಿಯಲು ಮುಂದಾಗುತ್ತಾರೆ. ಹೀಗೆ ಉತ್ತರ ಕರ್ನಾಟಕದಲ್ಲೇ ಕಾಯಿ ಎಸೆಯುವ ಜಾತ್ರೆ ವಿಶೇಷವಾಗಿದ್ದು, ನೂರಾರು ವರ್ಷಗಳ ಇತಿಹಾಸವನ್ನೇ ಹೊಂದಿದೆ.
ಇದನ್ನೂ ಓದಿ: ಇಷ್ಟಾರ್ಥಗಳನ್ನು ಈಡೇರಿಸುವ ಹನುಮ.. ಮಕ್ಕಳಿಲ್ಲದವರಿಗೆ ಸಂತಾನ ಕರುಣಿಸುವ ದೇವರಿಗೆ ವಿಶಿಷ್ಟ ಹರಕೆ