ಬಾಗಲಕೋಟೆ : ಬೆಳಗಾವಿ ಜಿಲ್ಲೆಯಾದ್ಯಂತ ಈಗ ಮಲಪ್ರಭಾ ನದಿಯ ಒತ್ತುವರಿ ತೆರವುಗೊಳಿಸುವ ಬಗ್ಗೆ ಚರ್ಚೆ ನಡೆದಿದೆ.
ನವಿಲು ತೀರ್ಥ ಜಲಾಶಯದಿಂದ ಕೂಡಲಸಂಗಮದವರೆಗೆ ಹರಿಯುತ್ತಿರುವ ನದಿಯು ಒತ್ತುವರಿಯಿಂದಾಗಿ ಪ್ರವಾಹ ಉಂಟಾಗುತ್ತಿದ್ದು, ಮಹಾದಾಯಿ ಯೋಜನೆ ಜಾರಿಗೆ ಬರುವ ಮುಂಚೆ ಒತ್ತುವರಿ ತೆರೆವು ಗೊಳಿಸಬೇಕು ಎಂಬ ಒತ್ತಾಯ ಹೆಚ್ಚಿದೆ.
ಜಲಾಶಯದಿಂದ ಕೂಡಲಸಂಗಮವು ಸುಮಾರು 365 ಕಿ.ಮೀ ದೂರವಿದೆ. 1984ರಲ್ಲಿ ನದಿಯ ಪಾತ್ರವು 130 ಮಿಟರ್ ಅಗಲ ಇದ್ದು, ಈಗ ಒತ್ತುವರಿಯಿಂದ ಕೇವಲ 10 ಮೀಟರ್ನಷ್ಟು ಉಳಿದಿದೆ. ಇದರಿಂದ ಪ್ರತಿ ವರ್ಷ ಅಧಿಕ ಮಳೆಯಾಗಿ, ಮಲ್ಲಪ್ರಭಾ ನದಿ ಪಾತ್ರದಲ್ಲಿ 5 ಸಾವಿರ ಕ್ಯೂಸೆಕ್ಗಿಂತ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟರೇ ಪ್ರವಾಹ ಉಂಟಾಗಿ, ಬೆಳೆ ಹಾನಿ, ಗ್ರಾಮಗಳ ಮುಳುಗಡೆಯಾಗಿತ್ತಿವೆ.
ಅಂದಾಜು 10 ಸಾವಿರ ಎಕರೆ ಪ್ರದೇಶದಷ್ಟು ಒತ್ತುವರಿ ಆಗಿದ್ದು, ರಾಜ್ಯ ಸರ್ಕಾರದ ಪ್ರಮುಖ ಸಚಿವರಾದ ಗೋವಿಂದ ಕಾರಜೋಳ ಹಾಗೂ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರೇ ಒತ್ತುವರಿ ಬಗ್ಗೆ ಪ್ರಸ್ತಾಪ ಮಾಡಿರುವುದು ಸಕಾರಾತ್ಮಕವಾಗಿದೆ. ಈ ಹಿನ್ನೆಲೆ ಇದು ಕೇವಲ ಹೇಳಿಕೆ ಆಗದೇ, ಕಾರ್ಯಗತ ಆಗಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಪರ ಕ್ರಿಯಾ ಸಂಘಟನೆ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
ಮಹಾದಾಯಿ ಯೋಜನೆ ಕಳಸಾ ಬಂಡಾರಿ ನಾಲಾ ಯೋಜನೆ ಪ್ರಾರಂಭ ಆಗುವ ಮುಂಚೆ ಸರ್ಕಾರ ಮಲ್ಲಪ್ರಭಾ ನದಿ ಒತ್ತುವರಿ ತೆರೆವುಗೊಳಿಸುವುದು ಅಗತ್ಯವಿದೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
ಸುಪ್ರೀಂಕೋರ್ಟ್ನಲ್ಲಿದ್ದ ಮಹಾದಾಯಿ ನದಿ ನೀರು ಯೋಜನೆಯ ಬಗ್ಗೆ ಶೀಘ್ರವಾಗಿ ಆದೇಶ ಹೊರ ಬರಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಲಪ್ರಭಾ ನದಿಯ ತೆರೆವುಗೊಳಿಸುವುದಕ್ಕೆ ವಿಶೇಷ ಸಮಿತಿ ರಚನೆ ಮಾಡಿ, ಅದರಲ್ಲಿ ಜಿಲ್ಲಾಧಿಕಾರಿಗಳಿಗೆ ಎಲ್ಲ ಹಕ್ಕು ನೀಡಿ, ರಾಜಕೀಯವಾಗಿ ಒತ್ತಡ ಆಗದಂತೆ ನೋಡಿಕೊಂಡರೆ, ಒತ್ತುವರಿ ತೆರೆವು ಆಗಬಹುದು ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.
ಇದಕ್ಕಾಗಿ ಪ್ರತ್ಯೇಕ 10 ಸಾವಿರ ಕೋಟಿ ಬಜೆಟ್ ನೀಡಿದರೆ, ಎಲ್ಲವೂ ಕಾರ್ಯ ರೂಪಕ್ಕೆ ಬರಲಿದೆ. 1984ರಲ್ಲಿ ಇದ್ದ ಮಲಪ್ರಭಾ ನದಿಯ ನಕ್ಷೆಯಂತೆ ಮಾಡುವುದು ಅಗತ್ಯವಿದೆ. ಮರಳು ಮಾಫಿಯಾ, ರಾಜಕಾರಣಿಗಳ ಕೈವಾಡದಿಂದ ಒತ್ತುವರಿಯಾಗಿರೋ ನದಿ ಈಗ ಚರಂಡಿಯಷ್ಟು ಅಗಲವಿದೆ. ಈ ಬಗ್ಗೆ ಶೀಘ್ರ ಸಮಿತಿ ರಚನೆ ಮಾಡಬೇಕು ಎಂದು ರಾಮದುರ್ಗ ಪಟ್ಟಣದ ನಾಗರಿಕ ಹಕ್ಕುಗಳ ವೇದಿಕೆಯ ಅಧ್ಯಕ್ಷ ಮಾರುತಿ ಚಂದರಗಿ ಒತ್ತಾಯಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಮಲಪ್ರಭಾ ನದಿಯ ಒತ್ತುವರಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಮೊದಲು ಜಾಗೃತಿ ಮೂಡಿಸಿದ್ದಾರೆ. ಆದರೆ, ಇದು ಕೇವಲ ಹೇಳಿಕೆಯಾಗಿ ಉಳಿಯದೇ, ಕಾರ್ಯಗತವಾಗಿ ಜಾರಿಗೆ ತರಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮಿತಿ ರಚನೆ ಮಾಡಿ, ಶೀಘ್ರವಾಗಿ ತೆರೆವು ಗೊಳಿಸುವ ಕಾರ್ಯ ಪ್ರಾರಂಭಿಸುವುದು ಅಗತ್ಯ.