ಬಾಗಲಕೋಟೆ: ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳಿಬ್ಬರು ಒಂದೇ ಹುದ್ದೆಗಾಗಿ ಪರಸ್ಪರ ಹಗ್ಗಜಗ್ಗಾಟ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಅವರು ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಡಾ.ರಾಜಕುಮಾರ್ ಯರಗಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಒಂದೇ ಹುದ್ದೆಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
''ವಿಜಯಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಯರಗಲ್ ಅವರು ಅಲ್ಲಿನ ಜಿ.ಪಂ. ಸಿಇಒ ಅವರಿಂದ ಬಿಡುಗಡೆ ಪತ್ರ ಪಡೆದಿಲ್ಲ. ಅಲ್ಲದೇ ಇಲ್ಲಿಯ ಆರೋಗ್ಯಾಧಿಕಾರಿಗಳಿಂದ ಅಧಿಕಾರ ಹಸ್ತಾಂತರ ಕೂಡ ಮಾಡಿಕೊಂಡಿಲ್ಲ.'' ಎಂದು ಡಾ.ಜಯಶ್ರೀ ಎಮ್ಮಿ ಆರೋಪಿಸಿದರು. ಈ ಆರೋಪವನ್ನು ತಳ್ಳಿ ಹಾಕಿರುವ ಡಾ.ಯರಗಲ್, ''ನನಗೆ ಸರ್ಕಾರ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ನೀಡಿದೆ. ಅದರಂತೆ ನಾನು ಅಧಿಕಾರ ಸ್ವೀಕರಿಸಿದ್ದೇನೆ'' ಎಂದರು.
ಇದನ್ನೂ ಓದಿ: ಮಂಡ್ಯ ಅಧಿಕಾರಿಗಳ ಹೆಸರಲ್ಲಿ ಮೈಸೂರಿನ ಅಧಿಕಾರಿಗಳು ಪತ್ರ ಬರೆದಿರುವ ಮಾಹಿತಿ ಇದೆ: ಕೃಷಿ ಸಚಿವ ಚಲುವರಾಯಸ್ವಾಮಿ
ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ನ್ಯಾಯಮಂಡಳಿಯ ಮೊರೆ ಹೋಗಿರುವ ಡಾ.ಜಯಶ್ರೀ ಎಮ್ಮಿ ಅವರಿಗೆ ಯಾವುದೇ ಹುದ್ದೆಯನ್ನು ನೀಡದಿರುವುದು ಮತ್ತು ಡಾ. ಯರಗಲ್ ಅವರನ್ನು ಅದೇ ಹುದ್ದೆಗೆ ವರ್ಗಾವಣೆ ಮಾಡಿರುವುದು ಈ ತಿಕ್ಕಾಟಕ್ಕೆ ಕಾರಣವಾಗಿದೆ. ಹುದ್ದೆಗಾಗಿ ಕೆಲ ಸಮಯ ಪರಸ್ಪರ ವಾಕ್ಸಮರ ನಡೆಸಿದ ಅಧಿಕಾರಿಗಳು ನಂತರ ಪೊಲೀಸರ ಮೊರೆ ಹೋದರು.
ಅದಕ್ಕೂ ಮುನ್ನ, ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ.ಜಯಶ್ರೀ ಎಮ್ಮಿ, ''ಆ.12 ಮತ್ತು 14 ರಂದು ತಾವು ಪೂರ್ವಾನುಮತಿ ಪಡೆದು ಎರಡು ದಿನ ರಜೆಯಲ್ಲಿದ್ದೆ. ಈ ಅವಧಿಯಲ್ಲಿ ಡಾ. ರಾಜಕುಮಾರ ಯರಗಲ್ ಅಧಿಕಾರ ವಹಿಸಿಕೊಂಡಿದ್ದಾರೆ. ವರ್ಗಾವಣೆ ಆದೇಶ ಪ್ರಶ್ನಿಸಿ ನ್ಯಾಯಮಂಡಳಿಯ ಮೊರೆ ಹೋಗಿರುವ ಕಾರಣದಿಂದಾಗಿ ಎಂದಿನಂತೆ ಕರ್ತವ್ಯಕ್ಕೆ ಅಣಿಯಾದ ನಾನು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಲು ಮುಂದಾದರೆ ಡಾ.ಯರಗಲ್ ಅವರು ಕೆಲಸದ ಪುಸ್ತಕದಲ್ಲಿ ಹಾಜರಿ ಹಾಕಲು ಬಿಡುತ್ತಿಲ್ಲ. ನಿಮಗೆ ಎಲ್ಲಿ ಹುದ್ದೆ ನೀಡಿದ್ದಾರೋ ಅಲ್ಲಿ ಹಾಜರಿ ಮಾಡಿಕೊಳ್ಳಿ ಎಂದು ವಾದ ಮಾಡುತ್ತಿದ್ದಾರೆ. ನನ್ನದು ಬೇರೆ ಕಡೆಗೆ ಇನ್ನೂ ವರ್ಗಾವಣೆ ಆಗಿಲ್ಲವೆಂದು ಹೇಳಿದರೂ ಕೇಳುತ್ತಿಲ್ಲ. ಸರ್ಕಾರ ವರ್ಗಾವಣೆ ಸ್ಥಳ ನೀಡದ ಹಿನ್ನೆಲೆಯಲ್ಲಿ ಕೆಇಟಿಗೆ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ನಾನು ಇಲ್ಲೇ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರೂ ಅವರು ಕೇಳುತ್ತಿಲ್ಲ'' ಎಂದು ತಿಳಿಸಿದರು.
ಆದರೆ, ಸರ್ಕಾರದ ಆದೇಶದ ಪ್ರಕಾರ ತಾವು ಇಲ್ಲಿಗೆ ವರ್ಗವಾಗಿ ಬಂದಿರುವುದಾಗಿ ಹೇಳುತ್ತಿರುವ ಡಾ. ಯರಗಲ್, ''ಸರ್ಕಾರ ಏನು ಹೇಳಿದೆಯೋ ಅದನ್ನು ಮಾಡುತ್ತಿದ್ದೇನೆ. ಸರ್ಕಾರದ ಆದೇಶದ ಪ್ರಕಾರ ಅಧಿಕಾರ ವಹಿಸಿಕೊಂಡಿದ್ದೇನೆ. ಆದೇಶ ಪತ್ರವೂ ಸಹ ನನ್ನ ಬಳಿದೆ. ಇದರ ಹೊರತಾಗಿ ಏನು ಹೇಳಲಾರೆ" ಎಂದರು.
ಇದನ್ನೂ ಓದಿ: 'ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡಕ್ಕೆ ಅನುಮತಿ ಇಲ್ಲ': ಹೈಕೋರ್ಟ್‌ನಲ್ಲಿ ನಟ ಗಣೇಶ್ಗೆ ಹಿನ್ನಡೆ