ಬಾಗಲಕೋಟೆ: ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲ ಉಂಟಾಗಿದ್ದು, ಸೆಪ್ಟೆಂಬರ್ 4 ರಂದು ಸಭೆ ನಡೆಸಿ ಬರಗಾಲ ಪೀಡಿತ ತಾಲೂಕಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಇರೋದಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆ ಆಗಿದೆ. ಅದಕ್ಕೆ 113 ತಾಲೂಕುಗಳನ್ನು ಬರಗಾಲ ಎಂದು ಘೋಷಿಸಲಾಗುತ್ತದೆ ಎಂದರು.
ಇನ್ನೂ 73ತಾಲೂಕುಗಳಲ್ಲಿ ಬರಗಾಲ ಇದ್ದು, 4ನೇ ತಾರೀಖಗೆ ಸಭೆ ನಡೆಸಿ, ಒಟ್ಟು ಎಷ್ಟು ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು. ಯಾವ್ಯಾವ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆಯೋ ಅವುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಘೋಷಣೆಗೆ ಮನವಿ ಸಲ್ಲಿಸಲಾಗುವುದು. ಎನ್ಡಿಆರ್ಎಫ್ ನಿಯಮಗಳನ್ನು 2020ಯಿಂದ ಬದಲಾವಣೆ ಮಾಡಿಲ್ಲ. ಅದನ್ನು ಹೆಚ್ಚಿಗೆ ಮಾಡಲು ಪತ್ರದಲ್ಲಿ ಬರೆಯುತ್ತೇನೆ ಎಂದು ತಿಳಿಸಿದರು.
ಕೃಷ್ಣಾ ಯೋಜನೆಗಳಿಗೆ ಬಜೆಟ್ನಲ್ಲಿ ಹಣ ಮೀಸಲಿಡುವ ವಿಚಾರವಾಗಿ ಮಾತನಾಡಿ, ಹಿಂದಿನ ಸರ್ಕಾರದವರು ಇಟ್ಟಿದ್ದ 21ಸಾವಿರ ಕೋಟಿ ಹಣವನ್ನು ನಾವು ಮುಂದಿವರೆಸಿದ್ದೇವೆ. ತುಂಗಭದ್ರಾ ಯೋಜನೆಗೆ ಕೇಂದ್ರದಿಂದ 5 ಸಾವಿರ ಕೋಟಿ ಬರುತ್ತದೆ ಎಂದು ಹಿಂದಿನ ಸರ್ಕಾರದವರು ಹೇಳಿದ್ದರು. ಬಂತಾ? ಬಂದಿಲ್ಲವಲ್ಲ ಎಂದು ಪ್ರಶ್ನೆ ಮಾಡಿದ ಸಿಎಂ, ಕೃಷ್ಣಾ ಯೋಜನೆಗೆ ನಾವು ಯಾವುದೇ ಹಣ ಕಡಿಮೆ ಮಾಡಿಲ್ಲ. ಈಗ 130 ಟಿಎಂಸಿ ನೀರು ಸಂಗ್ರಹ ಇದೆ, ಡ್ಯಾಂ ಎತ್ತರ 519 ಇದೆ, ಇದು 523 ಮೀಟರ್ ಎತ್ತರಕ್ಕೆ ಹೆಚ್ಚಳ ಆದಾಗ ಆಂಧ್ರಪ್ರದೇಶ, ಕರ್ನಾಟಕಕ್ಕೆ ಬೇಕಾದಷ್ಟು ನೀರಿನ ಹಂಚಿಕೆ ಸರಿಯಾಗಿ ಆಗಲಿದೆ. ಕೃಷ್ಣಾ ಯೋಜನೆಗೆ 83 ಸಾವಿರ ಕೋಟಿ ಬೇಕಾಗಬಹುದು. ಆದ್ರೆ ಇನ್ನು ಗೆಜೆಟ್ ನೋಟಿಫಿಕೇಷನ್ ಆಗಬೇಕಿದೆ ಎಂದು ಸಿಎಂ ತಿಳಿಸಿದರು.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಹತ್ರ ನೀರಿಲ್ಲ, ಆದರೂ ಪ್ರತಿದಿನ 5 ಸಾವಿರ ಕ್ಯೂಸೆಕ್ ಬಿಡಬೇಕು ಅಂತ ಆರ್ಡರ್ ಆಗಿದೆ. ತಮಿಳುನಾಡಿನವರು ಪ್ರತಿದಿನ 24 ಸಾವಿರ ಕ್ಯೂಸೆಕ್ ಬಿಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಅಷ್ಟು ನೀರು ಇಲ್ಲ, ಬಿಡಲು ಆಗೋದಿಲ್ಲ, ನೀರು ಸಂರಕ್ಷಿಸೋ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇಸ್ರೋದಿಂದ ಆದಿತ್ಯ ಎಲ್1 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿರುವ ಬಗ್ಗೆ ಮಾತನಾಡಿ, ನಾವು ಈಗಾಗಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ್ದೇವೆ. ಇವತ್ತು ಲಾಂಚ್ ಆಗಿರುವ ರಾಕೆಟ್ ಯಶಸ್ವಿಯಾಗಲಿ ಎಂದು ಶುಭಕೋರಿದರು. ಇದೇ ಸಮಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯೆ ಕರ್ನಾಟಕ ಎಂಬ ಯಾವುದೇ ತಾರತಮ್ಯ ಇಲ್ಲದೆ ಸಮಗ್ರ ಕರ್ನಾಟಕ ದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆಯ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Cauvery water issue: ಕಾವೇರಿ ನೀರು ಹಂಚಿಕೆ ವಿವಾದ.. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯ