ಬಾಗಲಕೋಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಚುನಾವಣೆ ಬಳಿಕ ರಾಜ್ಯಕ್ಕೆ ಟಾಟಾ ಮಾಡಿ, ಹೋಗುತ್ತಾರೆ. ಅವರೆಲ್ಲ ಬರೋದು ಮುಂದೆ ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ಮಾತ್ರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲೂಟಿ ಹೊಡೆಯುವುದೇ ಡಬಲ್ ಇಂಜಿನ್ ಸರ್ಕಾರದ ಕೆಲಸವಾ ಎಂದು ಪ್ರಶ್ನೆ ಮಾಡಿದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರ ನಾಯಕರು ರಾಜ್ಯಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಹ ಬಂದಿದ್ದಾರೆ. ಎಲೆಕ್ಷನ್ ಮುಗಿದ ಮೇಲೆ ಕರ್ನಾಟಕಕ್ಕೆ ಟಾಟಾ ಮಾಡಿ ಹೋಗುತ್ತಾರೆ. ಮತ್ತೆ ಬರೋದು ಲೋಕಸಭಾ ಚುನಾವಣೆ ಬಂದಾಗ ಅಷ್ಟೆ ಎಂದು ವ್ಯಂಗ್ಯ ಮಾಡಿದರು. ಪ್ರಧಾನಿ ಮೋದಿ ಇಲ್ಲಿಗೆ ಬಂದು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಅಂತಾರೆ, ಆದರೆ, ಅದೇ ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. ಅದು ಅವರ ಕಣ್ಣಿಗೆ ಕಾಣಿಸುತ್ತಿಲ್ಲ, ಲೂಟಿ ಹೊಡೆಯೋದೇ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿಯಾ? ಎಂದು ಮತ್ತೆ ಮತ್ತೆ ಪ್ರಶ್ನೆ ಮಾಡಿದರು.
ಜೆಡಿಎಸ್ ಕಾಂಗ್ರೆಸ್ ಪಕ್ಷದ ಬಿ ಟೀಂ ಎಂಬ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮೋದಿಯವರು ಕಾಂಗ್ರೆಸ್ ಬಿ ಟೀಂ ಅಂತಾರೆ, ಸಿದ್ದರಾಮಯ್ಯ ನಮ್ಮನ್ನ ಬಿಜೆಪಿ ಬಿ ಟೀಂ ಅಂತಾರೆ, ನಾನು ಯಾರ ಬಿ ಟೀಂ ಕೂಡ ಅಲ್ಲ, ನಾನು ನಾಡಿನ ಜನರ ಬಿ ಟೀಂ ಎಂದು ಭರ್ಜರಿಯಾಗೇ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅಕಾಲಿಕ ಮಳೆಯಿಂದ ರೈತರ ಬೆಳೆ ನಾಶ ಆಗಿವೆ. ಅವುಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರರ ಬಗ್ಗೆ ವಾಗ್ದಾಳಿ ನಡೆಸಿ, ಸಮಯ ವ್ಯರ್ಥ ಮಾಡುತ್ತಿದೆ. ಒಂದು ಪಕ್ಷದ ನಾಯಕರು ಇನ್ನೊಂದು ಪಕ್ಷದ ನಾಯಕರನ್ನು ವಿಷಸರ್ಪ ಎಂದರೆ, ಆ ಪಕ್ಷದವರು ಈ ಪಕ್ಷದವರನ್ನು ವಿಷಕನ್ಯೆ ಎಂದು ಕರೆದುಕೊಂಡಿದ್ದಾರೆ. ನನ್ನ ಪ್ರಕಾರ ಈ ಸಮಯದಲ್ಲಿ ಈ ವಾಗ್ದಾಳಿ ಬೇಕಿರಲಿಲ್ಲ. ಇದನ್ನು ಬಿಟ್ಟು ಚರ್ಚಿಸಲು ಹಲವಾರು ಸಮಸ್ಯೆಗಳಿವೆ ರಾಜ್ಯದಲ್ಲಿ, ಮೊದಲು ಅವುಗಳನ್ನು ಚರ್ಚಿಸಿ, ಬಗೆಹರಿಸೋಣ ಎಂದು ಹೇಳಿದರು.
ಬಿಜೆಪಿಯವ್ರ ಬ್ರಾಹ್ಮಣ ಸಿಎಂ ಮಾಡ್ತಾರೆ ಎಂಬ ಹೇಳಿಕೆಗೆ, ನನ್ನ ಅಭಿಪ್ರಾಯದಲ್ಲಿ ಲಿಂಗಾಯತ ಸಿಎಂ ಮಾಡಲ್ಲ ಎಂದು ಹೇಳಿದರು. ನಂತರ ಬಾದಾಮಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ರೂಡ್ ಶೋ ಪ್ರಾರಂಭಿಸಿ, ಜೆಡಿಎಸ್ ಅಭ್ಯರ್ಥಿ ಆಗಿರುವ ಹನಮಂತ ಮಾವಿನಮರದ ಅವರೊಂದಿಗೆ ತೆರೆದ ವಾಹನದ ಮೂಲಕ ಬೃಹತ್ ರೂಡ್ ಶೋ ನಡೆಸಿ, ಕಾಂಗ್ರೆಸ್, ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸೋಲಿಸಲು ಬಿಜೆಪಿ ಬಿ ಟೀಂ ನಿಂದ ಚುನಾವಣಾ ಹೊಂದಾಣಿಕೆ: ಜೈ ರಾಂ ರಮೇಶ್