ಬಾಗಲಕೋಟೆ : ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಜಯ ಸಾಧಿಸದಿರುವುದಕ್ಕೆ ಪ್ರವಾಹವೇ ಮುಖ್ಯ ಕಾರಣವಾಯಿತು. ದೇಶ ಬಂದಾಗ ನರೇಂದ್ರ ಮೋದಿ ಮುಖ್ಯವಾದರೆ ವಿಧಾನಸಭಾ ಮತ್ತು ಜಿಲ್ಲಾವಾರು ಚುನಾವಣೆಗಳಲ್ಲಿ ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮರಾಠಾ ಹಾಗೂ ಹರಿಯಾಣದಲ್ಲಿ ಜಾಟ್ ಸಮುದಾಯವನ್ನೂ ಓಲೈಸುವಲ್ಲಿ ಸ್ವಲ್ಪ ಕೊರತೆ ಕಂಡು ಬಂದಿದೆ. ಸ್ಥಳೀಯ ನಾಯಕತ್ವದಿಂದಲೇ ಸ್ಥಳೀಯ ಚುನಾವಣೆಗಳು ನಡೆಯುತ್ತವೆ ಎನ್ನುವುದಕ್ಕೆ ಎರಡು ರಾಜ್ಯಗಳ ಮತದಾರರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ಸಂತ್ರಸ್ತರು ಭಿಕ್ಷುಕರಲ್ಲ:
ಪ್ರವಾಹದಿಂದಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸಿರುವ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕನಾರ್ಟಕದ ಜನತೆ ಭಿಕ್ಷುಕರಲ್ಲ. ಇವರೆಲ್ಲರೂ ಸ್ಥಿತಿವಂತರಿದ್ದಾರೆ. ಪ್ರವಾಹಕ್ಕೆ ತುತ್ತಾಗಿ ಆಥಿರ್ಕವಾಗಿ ತೊಂದರೆಯನ್ನು ಅನುಭವಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಕೇಂದ್ರದ ಸಚಿವರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ನೆರೆಯ ಮಹಾರಾಷ್ಟ್ರ ರಾಜ್ಯದ ಚುನಾವಣೆ ಸಂದರ್ಭದಲ್ಲಿ ನನಗೆ ಯಾವದೇ ರೀತಿಯ ಪ್ರಚಾರ ನಡೆಸಬೇಕೆಂಬ ಆದೇಶವಾಗಲಿ, ಸಂದೇಶವಾಗಲಿ ಪಕ್ಷ ರವಾನಿಸಿಲ್ಲ. ಬದಲಾಗಿ ಸೋತ, ಮೂರನೇ, ನಾಲ್ಕನೇ ಸ್ಥಾನ ಪಡೆದ ಹಾಗೂ ಅರಿಯದ ವ್ಯಕ್ತಿಗಳು ಪ್ರಚಾರದ ಮುಂಚೂಣಿಯಲ್ಲಿದ್ದರು. ಇದರಿಂದಲೇ ಪಕ್ಷಕ್ಕೆ ಮುಖ ಭಂಗವಾಗಿರುವದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಕಿಡಿಕಾರಿದರು.