ಬಾಗಲಕೋಟೆ: ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ನಡೆದುಕೊಳ್ಳುತ್ತಾರೆಂದು ನಿರೀಕ್ಷೆ ಮಾಡಿದ್ದೆವು. ಆರ್ಎಸ್ಎಸ್ ಮತ್ತು ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದರಾಮಯ್ಯ ಅವರಿಗೆ ಇರುವ ಗೌರವ ಸಹ ಹಾಳಾಗುತ್ತದೆ. ಈ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿವಾದದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಎಲ್ಲ ಸರಿಪಡಿಸುತ್ತೇವೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದನ್ನು ದೊಡ್ಡ ಗೊಂದಲ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನಗರದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮುಖಾಮುಖಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಹೊರಟಿದ್ದರು, ನಾನು ಸಹ ಹೊರಟಿದ್ದೆ. ನಾನು ಕೂತಿದ್ದೆ, ಅವರು ಸಹ ಬಂದರು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ. ನಮ್ಮ ಕಟ್ಟಾ ವಿರೋಧಿಗಳು ತಾನೆ ಅವರು, ಅವರ ಜೊತೆ ಯಾವುದೇ ರೀತಿಯಲ್ಲಿ ಮಾತನಾಡುವ ಪ್ರಶ್ನೆ ಉದ್ಭವ ಆಗೋದಿಲ್ಲ ಎಂದರು.
ಇದನ್ನೂ ಓದಿ: ಚಡ್ಡಿ ಜಟಾಪಟಿ: ಬಿಜೆಪಿಯಿಂದ ಸಿದ್ದರಾಮಯ್ಯ ಮನೆಗೆ ತೆರಳಿ ಚಡ್ಡಿ ತಲುಪಿಸುವ ಆಂದೋಲನ
ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನೂತನ ಸಭಾಂಗಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳಾದ ಅರುಣಕುಮಾರ ಶಹಾಪೂರ ಹಾಗೂ ಹನುಮಂತ ನಿರಾಣಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಸೇರಿ ಹಾಲಿ ಹಾಗೂ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.