ಬಾಗಲಕೋಟೆ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಜಾರಿಗೆ ತಂದಿರುವ ಕ್ರಮಕ್ಕೆ ಬಿಜೆಪಿ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ನಗರದ ಶಾಸಕರಾದ ಡಾ.ವೀರಣ್ಣ ಚರಂತಿಮಠ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇ- ಟೆಂಡರ್ ಸೇರಿದಂತೆ ಇತರ ಸೌಲಭ್ಯಗಳ ಬಗ್ಗೆ ಈಗ ಇದ್ದ ಕಾಯ್ದೆ ಪ್ರಕಾರ ರೈತರಿಗೆ ಅನುಕೂಲವಾಗಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಾಯ್ದೆ ಬದಲಾವಣೆ ಮಾಡದಿದ್ದರೆ ಏನು ತೊಂದರೆ ಆಗುತ್ತಿತ್ತು ಎಂಬುದು ಅರ್ಥವಾಗುತ್ತಿಲ್ಲ.
ಈ ಬಗ್ಗೆ ಮುಖ್ಯಮಂತ್ರಿಯವರ ಭೇಟಿ ಆಗಿ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ ಶಾಸಕರು, ಹಿಂದೆ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಇದ್ದ ಸಮಯದಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ಒಪ್ಪಂದ ಮಾಡಿಕೊಂಡು ಬದಲಾವಣೆ ತರುವ ಸಮಯದಲ್ಲಿ ಆರು ತಿಂಗಳಗಟ್ಟಲೆ ಎಪಿಎಂಸಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದೆವು.
ಆಗ ಸರ್ಕಾರ ಇಂತಹ ಕಾಯ್ದೆ ಹಿಂದಕ್ಕೆ ಪಡೆಯಲಾಯಿತು. ನಾವು ಬಿಜೆಪಿ ಪಕ್ಷದ ಶಾಸಕರಿದ್ದರು, ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ರೈತರಿಗೆ ಹಾಗೂ ಎಪಿಎಂಸಿ ಹಿತ ದೃಷ್ಟಿಯಿಂದ ಈಗ ಇರುವ ಕಾಯ್ದೆ ಮುಂದುವರೆಸುವಂತೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ನಾವು ಪಕ್ಷದಲ್ಲಿ ಇದ್ದೇವೆ ಎಂದು ಎಲ್ಲವೂ ಒಪ್ಪಿಕೊಳ್ಳಬೇಕು ಎಂಬುದು ಇಲ್ಲ, ನಾವು ಸ್ವತ್ರಂತ್ರವಾಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಈ ಕಾಯ್ದೆ ಬಗ್ಗೆ ಸಚಿವರಾದ, ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೆ.ಎಸ್ ಈಶ್ವರಪ್ಪ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.