ಬಾಗಲಕೋಟೆ: ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. 5 ವರ್ಷದ ಅಧಿಕಾರಾವಧಿಯಲ್ಲಿ ಅವರು ರೈತರಿಗೆ ಏನೂ ಮಾಡಿಲ್ಲ. ಅವರಿಗೆ ಮಾತುಗಳನ್ನು ಹೇಗೆ ತಿರುಚಿ ಮಾತಾಡಬೇಕೆನ್ನುವುದು ಮಾತ್ರ ಗೊತ್ತು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆ ನಗರದ ಗದ್ದಿನಕೇರಿ ಕ್ರಾಸ್ ಬಳಿರುವ ಲಡ್ಡು ಮುತ್ತ್ಯಾ ದೇವಾಲಯದಲ್ಲಿ ಇಂದು ನಡೆದ ಜನ ಸಂಪರ್ಕ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬರಗಾಲದ ಬಗ್ಗೆ ಯಾರಾದ್ರೂ ಮಾತಾಡುತ್ತಿದ್ದಾರಾ? ಕೇಂದ್ರದಿಂದ ನಾವು ಇಷ್ಟು ಹಣ ತಂದಿದ್ದೀವಿ ಎಂದು ಹೇಳಲಿ ನೋಡೋಣ ಎಂದು ಸಚಿವರು ಸವಾಲು ಹಾಕಿದರು. ಆರು ತಿಂಗಳಲ್ಲಿ ಸರ್ಕಾರ ಉರುಳಲಿದೆ ಎಂಬ ಮಾಜಿ ಸಚಿವ ನಿರಾಣಿ ಹೇಳಿಕೆಗೆ ತಿರುಗೇಟು ನೀಡುತ್ತಾ, ಪಾಪ, ಕನಸು ಕಾಣುತ್ತಿದ್ದಾರೆ. ಇವ್ರಿಗೆ ಜನ ಯಾವತ್ತಾದ್ರೂ ಬಹುಮತ ಕೊಟ್ಟಿದ್ದಾರಾ?, ಅಡ್ಡದಾರಿ ಹಿಡಿದು ಅಧಿಕಾರಕ್ಕೆ ಹೋಗಬೇಕಂತಾರೆ. ಅಡ್ಡದಾರಿಯಲ್ಲಿ ಹೋದ್ರೆ ಯಶಸ್ವಿಯಾಗಲ್ಲ ಎಂದು ಟಾಂಗ್ ನೀಡಿದರು.
ಈ ಮುಂಚೆ ಜನ ಸಂಪರ್ಕ ಸಭೆ ನಡೆಸಿದ ಸಚಿವರು, ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಅಹವಾಲು ಸ್ವೀಕರಿಸಿದರು. ಸುಮಾರು 50 ಜನರ ಅಹವಾಲು ಸ್ವೀಕರಿಸಿದ ಸಚಿವರು ಸಮಸ್ಯೆಗಳನ್ನು ಆಲಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಇದನ್ನೂಓದಿ: ಸಿದ್ದರಾಮಯ್ಯನವರ ಯೋಜನೆಯನ್ನು ಯಾರೂ ಒಪ್ಪುವುದಿಲ್ಲ: ಸಂಸದ ಅನಂತಕುಮಾರ ಹೆಗಡೆ