ಬಾಗಲಕೋಟೆ/ಹುಬ್ಬಳ್ಳಿ: ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನ ಸಿಎಂ ಮಾಡಲ್ಲ ಅಂತಾ ನನಗೆ ವಿಶ್ವಾಸ ಇದೆ. ಹೀಗಾಗಿ ರಾಜೀನಾಮೆ ಕೊಡಿಸಿ ಕುದುರೆ ವ್ಯಾಪಾರ ಮಾಡುವ ಯೋಜನೆ ಬಿಜೆಪಿ ಹೊಂದಿಲ್ಲ. ಹೆಚ್ಚು ಅಂದ್ರೆ ವಿಧಾನ ಮಂಡಲವನ್ನ ಸಸ್ಪೆಂಡ್ ಮಾಡಬಹುದು. ಆದರೆ ಇದು ಕಾನೂನು ಬಾಹಿರ. ಇಂತಹ ಕೆಲಸ ಮಾಡೋದ್ರಲ್ಲಿ ಬಿಜೆಪಿಯವರು ಪ್ರವೀಣರು. ಆನಂದ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಅಸಿಂಧು ಆಗಿದೆ. ಆದ್ದರಿಂದ ಅದನ್ನು ಅಂಗೀಕಾರ ಮಾಡಲು ಬರುವುದಿಲ್ಲ ಎಂದು ಮಾಜಿ ಸಚಿವ ಬಸವಾರಾಜ್ ರಾಯರೆಡ್ಡಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಸರ್ಕಾರ ಪತನ ಆಗಲಿದೆ ಎಂದು ಬಿಜೆಪಿಯವರು ನಿನ್ನೆಯಿಂದ ಹೇಳಿಕೆ ನೀಡುತಿದ್ದಾರೆ. ಬಿಎಸ್ವೈ ಅವರಿಗೆ ಅರ್ಜೆಂಟ್ ಆಗಿ ಮುಖ್ಯಮಂತ್ರಿ ಆಗಬೇಕಿದೆ. ಆದರೆ ಬಿಎಸ್ವೈ ಮತ್ತೆ ಸಿಎಂ ಆಗಲೂ ಸಾಧ್ಯವೇ ಇಲ್ಲಾ. ನಾನು ರಾಜಕೀಯ ನಾಯಕನಾಗಿ ಹೇಳಿಕೆ ನೀಡುತ್ತಿಲ್ಲ. ಇದರಲ್ಲಿ ಕಾನೂನು ತೊಡಕು ಇದೆ. ಆದ್ದರಿಂದ ಬಿಜೆಪಿ ಹೈಕಮಾಂಡ್ ಬಿಎಸ್ವೈ ಅವರನ್ನು ಸಿಎಂ ಮಾಡಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಸದ್ಯ, ರಾಜೀನಾಮೆ ನೀಡಿದ ಶಾಸಕರು ಏನೂ ಆಗಲ್ಲ. ಬಿಜೆಪಿಗೆ ಸೇರುವ ಕೈ ಶಾಸಕರು ಮರು ಆಯ್ಕೆ ಆದ್ರೂ ಪಕ್ಷಾಂತರ ಕಾಯ್ದೆ ಪ್ರಕಾರ ಮಂತ್ರಿ ಆಗಲಿಕ್ಕೆ ಸಾಧ್ಯವಿಲ್ಲ. ಒಬ್ಬ ಶಾಸಕನಿಗೆ ₹ 30 ಕೋಟಿ ಕೊಡುತ್ತಾರೆ ಎಂಬ ಮಾಹಿತಿ ಇದೆ. ಸರ್ಕಾರ ರಚನೆ ಮಾಡಬೇಕಾದ್ರೆ 14 ಶಾಸಕರನ್ನ ಖರೀದಿ ಮಾಡಬೇಕು. ಅದು ಸಾಧ್ಯವಿಲ್ಲ. ಯಾಕಂದ್ರೆ 14 ಶಾಕರಿಗೆ ₹ 600 ಕೋಟಿ ರೂ. ಬೇಕು. ಹೀಗಾಗಿ ಬಿಜೆಪಿ ಈ ಹರಸಾಹಸಕ್ಕೆ ಕೈ ಹಾಕಲಿಕ್ಕಿಲ್ಲ ಎಂದರು.
ಹಾಗೇ, ಬಿಜೆಪಿ ಬಹಳ ನಯ-ನಾಜೂಕಿನಿಂದ ವರ್ತಿಸುತ್ತಿದೆ. ಈ ಎಲ್ಲ ವಿಷಯ ಅಮಿತ್ ಶಾ ಅವರಿಗೆ ಗೊತ್ತು. ಆದ್ರೂ ಸಹ ಹಿಂದೆ ಇದ್ದುಕೊಂಡು ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಾವು 120 ಶಾಸಕರ ಬಲ ಹೊಂದಿದ್ದೇವೆ. ಬಿಜೆಪಿಯದ್ದು ಕೇವಲ 105. ನಮ್ಮ 16 ಜನ ರಾಜೀನಾಮೆ ನೀಡಿದ್ರೆ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಅದು ಸಾಧ್ಯವಿಲ್ಲ ಎಂದರು.
ಇನ್ನು ಇದೇ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿರುವ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪೂರ, ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಇಲ್ಲ. ಸರ್ಕಾರ ಸುಭದ್ರವಾಗಿದೆ. ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನಿಜವಾಗಿ ನೀಡಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ ಎಂದರು.
ಹಾಗೆಯೇ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರಕ್ಕೆ ಯಾವ ತೊಂದರೆ ಆಗುವುದಿಲ್ಲ. ಅಲ್ಲದೆ ಬಿಜೆಪಿ ಪಕ್ಷದವರೂ ನಮ್ಮ ಜೊತೆಗಿದ್ದಾರೆ ಎಂದು ಟಾಂಗ್ ನೀಡಿದರು.