ಬಾಗಲಕೋಟೆ : ನಗರದ ಕಾಳಿದಾಸ ಮಹಾವಿದ್ಯಾಲಯ ಆವರಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕುರುಬ ಸಮಾವೇಶ ಜರುಗಿತು. ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕೆಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ವಿವಿಧ ಮಠಾಧೀಶರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂಬಿಟಿ ನಾಗರಾಜ್ ಮಾತನಾಡಿ, ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ನೀಡಿ ಎಂಬ ಕೂಗು ಕೆಂದ್ರ ಸರ್ಕಾರಕ್ಕೆ ಕೇಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ರೇ ಮುಂಬರುವ ದಿನಗಲಲ್ಲಿ 10 ಲಕ್ಷ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಬಡ ಹಾಗೂ ಕೆಳವರ್ಗದ ಜನತೆಗೆ ಮೀಸಲಾತಿ ಸಿಗುವಂತಾಗಬೇಕು. ಕುರುಬ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳು ನಡೆಯುತ್ತಾ ಬರುತ್ತಿವೆ. ಈಗ ಹೋರಾಟ ತೀವ್ರಗೊಂಡಿದ್ದು, ಕೆಳವರ್ಗ ಜಾತಿಗಳಿಗೆ ಮೀಸಲಾತಿ ಸಿಗಬೇಕಾಗಿದೆ ಎಂದರು.
ನಂತರ ಕನಕಗುರು ಪೀಠ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕುರುಬರ ಮೀಸಲಾತಿ ಸೇರಿದಂತೆ ಸಚಿವ ಸಂಪುಟದಲ್ಲಿಯು ಹೆಚ್ಚಿನ ಪ್ರಾತಿನಿತ್ಯ ನೀಡಬೇಕು. ಈ ಬಗ್ಗೆ ವಿಳಂಭ ಧೋರಣೆ ತಾಳಿದ್ರೆ ಇದ್ದ ಸಚಿವರು ರಾಜೀನಾಮೆ ನೀಡಿ, ಹೋರಾಟಕ್ಕೆ ಇಳಿಯುವ ಸ್ಥಿತಿ ಬರಬಹುದು.
ಈಗ ರಾಜ್ಯಾದ್ಯಂತ ಹೋರಾಟ ಮಾಡಿಕೊಂಡು ಬಂದಿದ್ದು, ಬೆಳಗಾವಿ ವಿಭಾಗ ಮಟ್ಟದ ನಂತರ ಇನ್ನು ಮುಂದೆ ಗ್ರಾಮದಿಂದ ಹಿಡಿದು ಬೆಂಗಳೂರಿನವರೆಗೆ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಸಿದರು. ಸಮಾವೇಶದಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರೆಲ್ಲರೂ ಪಕ್ಷಾತೀತವಾಗಿ ಭಾಗವಹಿಸಿದ್ದರು.