ಬಾಗಲಕೋಟೆ : ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಜನವರಿ 14ರಂದು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವುದು ಶತಃಸಿದ್ಧ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸ್ಪಷ್ಟ ಸಂದೇಶ ನೀಡುತ್ತೇವೆ ಎಂದು ಸಚಿವ ಸಿ ಸಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ಹೀಗಾಗಿ, ಪಾದಯಾತ್ರೆ ಹಮ್ಮಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೃಷಿಕರು, ಬಡವರು ಇರುವ ಈ ಸಮಾಜದಲ್ಲಿ ಮೀಸಲಾತಿಗಾಗಿ ಕಳೆದ 26 ವರ್ಷಗಳಿಂದ ಹಕ್ಕೊತ್ತಾಯ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈಗಲೂ ಕಾಲ ಮಿಂಚಿಲ್ಲ. ಮೀಸಲಾತಿ ಘೋಷಣೆ ಮಾಡಿದ್ರೆ, 14ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯ ನಡೆಯುತ್ತದೆ. ಪಾದಯಾತ್ರೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪಂಚಮಸಾಲಿ ಸಮುದಾಯದವರು ಭಾಗವಹಿಸಲಿದ್ದಾರೆ.
ಅಖಂಡ ಲಿಂಗಾಯತ ಮೀಸಲಾತಿ ಬಗ್ಗೆ ಹೋರಾಟ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜ್ಯ ಸರ್ಕಾರದ ಜಾತಿ ಆಧಾರದ ಮೀಸಲಾತಿ. ಈ ಮೀಸಲಾತಿಗೆ ಎಲ್ಲ ಒಳ ಪಂಗಡಗಳು ಸೇರಿದೆ. ನಮ್ಮ ಸಮಾಜ ಸೇರಿಲ್ಲ, ಹೀಗಾಗಿ ನಮ್ಮದು ಮಾತ್ರ ಕೇಳುತ್ತಿದ್ದೇವೆ. ಎಲ್ಲಾ ಲಿಂಗಾಯತ ಸಮುದಾಯಕ್ಕೆ ಕೇಂದ್ರ ಸರ್ಕಾರದ ಓಬಿಸಿಯಲ್ಲಿ ಮೀಸಲಾತಿ ನೀಡಿ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.