ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯನಿರತ ಬಾಗಲಕೋಟೆ ಮೂಲದ ಯೋಧನೋರ್ವನಿಗೆ ವಿಷಕಾರಿ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿತ್ತು. ಇಂದು ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕರ್ತಿ ಗ್ರಾಮದ ಚಿದಾನಂದ್ ಹಲಕುರ್ಕಿ(25) ಮೃತಪಟ್ಟಿದ್ದರು. ಯೋಧನ ಪಾರ್ಥಿವ ಶರೀರವನ್ನು ಇಂದು ಸ್ವ-ಗ್ರಾಮಕ್ಕೆ ಕರೆತಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರದ ನಡೆಸಲಾಯಿತು. ಮೃತ ಯೋಧ ಕಳೆದ 6 ವರ್ಷಗಳಿಂದ ಮರಾಠ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತು.
ಈ ಸಂದರ್ಭದಲ್ಲಿ ಇಡೀ ಗ್ರಾಮದ ತುಂಬ ಯೋಧನ ಪಾರ್ಥಿವ ಶರೀರ ಮೆರವಣಿಗೆ ನಡೆಸಲಾಯಿತು. ಇದಾದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಗ್ರಾಮದ ಹೃದಯ ಭಾಗದ ಅಗಸಿ ಮುಂದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸ್ಥಳದಲ್ಲಿ ಯೋಧನ ಪುತ್ಥಳಿ ನಿರ್ಮಾಣ ಮಾಡಿ, ನಮನ ಸಲ್ಲಿಸಲು ಗ್ರಾಮಸ್ಥರು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ.