ಬಾಗಲಕೋಟೆ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ವಿದ್ಯಾರ್ಥಿ ಡಾ.ಚಿದಾನಂದ ಕುಂಬಾರ ಬೆಳಗಲಿ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಚಿದಾನಂದ ಕುಂಬಾರ ಅವರು ಮಾಡಿದ ಈ ಸಾಧನೆಗೆ ಅವರ ತಂದೆ ಕಲ್ಲಪ್ಪ ಕುಂಬಾರಗೆ ಬೆಳಗಲಿ ಗ್ರಾಮದ ಮುಖಂಡರು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಕಲ್ಲಪ್ಪ ಕುಂಬಾರ, ಗ್ರಾಮೀಣ ಭಾಗದ ಯುವಕನೊಬ್ಬ ಈ ಮಟ್ಟಿಗೆ ಉನ್ನತ ಸ್ಥಾನಕ್ಕೆ ಏರಿದ್ದು, ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಧೋಳ ಶಾಸಕರು ಹಾಗೂ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಡಾ.ಚಿದಾನಂದ ಕುಂಬಾರ ಬೆಳಗಲಿ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ. ಇಂದು ಮುಂಜಾನೆ ಮಾನ್ಯ ಸಚಿವರು ಡಾ.ಚಿದಾನಂದ ಕುಂಬಾರ ಬೆಳಗಲಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮಗಾದ ಅತೀವ ಸಂತೋಷ ಹಂಚಿಕೊಂಡಿದ್ದಾರೆ.
ಬಡತನದ ಮಧ್ಯೆ ಸಾಧನೆ ಮಾಡಿರೋ ಚಿದಾನಂದ ಕುಂಬಾರ ಅವರ ತಂದೆ ಕಲ್ಲಪ್ಪ ಕುಂಬಾರ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಸದ್ಯ ದೆಹಲಿಯಲ್ಲಿ ಇರುವ ಯುವಕ ಚಿದಾನಂದ ಕುಂಬಾರ ಪರವಾಗಿ ಅವರ ತಂದೆ ಕಲ್ಲಪ್ಪ ಅವರನ್ನ ಗ್ರಾಮಸ್ಥರು ಸನ್ಮಾನಿಸಿದ್ದಾರೆ. ಊರ ಮಗನ ಸಾಧನೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿಯಲ್ಲಿ ದೇಶಕ್ಕೆ ಪ್ರಥಮ
ಡಾ.ಚಿದಾನಂದ ಕುಂಬಾರ 2021ನೇ ಸಾಲಿನ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಎಂಡಿ ಗ್ಯಾಸ್ಟ್ರೋಎಂಟರಾಲಜಿ (ಡೈಜೆಸ್ಟಿವ್ ಸಿಸ್ಟಂ)ನಲ್ಲಿ 400ಕ್ಕೆ 340 ಅಂಕ ಮತ್ತು ಎಂಡಿ ಹೆಪಟಾಲಜಿ (ಲಿವರ್ ಸ್ಪೆಷಲಿಸ್ಟ್)ನಲ್ಲಿ 400ಕ್ಕೆ 330 ಅಂಕಗಳನ್ನು ಪಡೆದಿದ್ದಾರೆ. ಈ ಎರಡೂ ವಿಭಾಗದಲ್ಲಿ ಇವರು ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.