ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚಿಗೆ ಸಾಕಷ್ಟು ಮಳೆ ಆಗಿದ್ದರಿಂದ ಹಳ್ಳ ಕೊಳ್ಳ ಕೆರೆ ತುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಬಾದಾಮಿ ತಾಲೂಕಿನ ಭೀಮನಗಡ ಗ್ರಾಮದ ಹತ್ತಿರ ಇರುವ ರಂಗಸಮುದ್ರ ಕೆರೆಯು ತುಂಬಿ ಕೋಡಿ ಹರಿಯುತ್ತಿದೆ.
1980 ರ ದಶಕದಲ್ಲಿ ಆಗಿನ ಕಾಲದ ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಡಳಿತ ಸಮಯದಲ್ಲಿ ಈ ಭಾಗದ ಜನತೆಗೆ ನೀರು ಸಿಗಲಿ ಎಂಬ ದೃಷ್ಟಿಯಿಂದ ಈ ಕೆರೆ ನಿರ್ಮಾಣ ಮಾಡಲಾಗಿತ್ತು. ಸುತ್ತಲೂ ಬೆಟ್ಟ ಇರುವುದರಿಂದ ಮಳೆ ಆದಾಗ ಸಾಕಷ್ಟು ನೀರು ಹರಿದು ಕೆರೆ ತುಂಬಿರುತ್ತಿತ್ತು.
ಈ ನೀರಿನ ಬಳಕೆಗಾಗಿ ಚಿಕ್ಕದಾದ ಕೆನಾಲ್ ಸಹ ನಿರ್ಮಿಸಲಾಗಿತ್ತು. ಕಳೆದ ಐದು ದಶಕಗಳಿಂದ ಈ ಕರೆಯು ತುಂಬದೆ ಹಾಳಾಗಿ ಹೋಗಿ ಈ ಯೋಜನೆ ಹಳ್ಳ ಹಿಡಿದಿತ್ತು. ಈಗ ಮತ್ತೆ ಸಾಕಷ್ಟು ಮಳೆ ಬಂದ ಪರಿಣಾಮ ತುಂಬಿ ಹರಿಯುತ್ತಿದ್ದು, ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆನಾಲ್ ಮಾರ್ಗ ಸರಿಪಡಿಸಿದರೆ ಈ ಭಾಗದ ರೈತರಿಗೆ ನೀರಾವರಿಗೆ ಅನುಕೂಲವಾಗಲಿದೆ.
ಈಗ ಬಾದಾಮಿಯು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ರಂಗ ಸಮುದ್ರ ಡ್ಯಾಮ್ನಿಂದ ಕೆನಾಲ್ ಮೂಲಕ ನೀರು ಹರಿದು ಬಿಟ್ಟರೆ ಮಂಗಲಗುಡ್ಡ, ಭೀಮನಗಡ, ಕಾಟಾಪೂರ ಹಾಗೂ ಸಿದ್ದನಕೊಳ್ಳ ಸೇರಿದಂತೆ ಸುತ್ತಮುತ್ತಲಿನ ಆರು ಗ್ರಾಮಗಳ ಸುಮಾರು ಐದು ನೂರಕ್ಕೂ ಅಧಿಕ ಏಕರೆ ಪ್ರದೇಶ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದ್ದು, ಜನ ಜಾನುವಾರುಗಳಿಗೆ ನೀರು ದೂರಕುವಂತಾಗುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ತೊಂದರೆ ಹೋಗಲಾಡಿಸಬಹುದು.
ಈ ಬಗ್ಗೆ ಕ್ಷೇತ್ರದ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನ ಹರಿಸಿ, ಬೇಸಿಗೆ ಸಮಯದಲ್ಲಿ ನೀರಿನ ತೊಂದರೆ ಆಗದಂತೆ ಕೆನಾಲ್ ಸರಿಪಡಿಸುವ ಕಾರ್ಯ ಮಾಡಿ, ರಂಗ ಸಮುದ್ರ ಡ್ಯಾಮ್ನಿಂದ ನೀರು ಹರಿಸುವ ಯೋಜನೆಗೆ ಮತ್ತೆ ಚಾಲನೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.