ಬಾಗಲಕೋಟೆ : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನಾಮ ನಿರ್ದೇಶನ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಫಲಿತಾಂಶ ಘೋಷಣೆಯಾಗಿಲ್ಲ. ನಾಳೆ ನ್ಯಾಯಾಲಯದ ಆದೇಶದ ಬಳಿಕ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕುಮಾರ ಜನಾಲಿ ಅಧ್ಯಕ್ಷ ಸ್ಥಾನಕ್ಕೆ, ಪ್ರಕಾಶ ತಪಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ನಿಂದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜೇಯಕುಮಾರ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಮುರಗೇಶ ಕಡ್ಲಿಮಟ್ಟಿ ನಾಮಪತ್ರ ಸಲ್ಲಿಸಿದ್ದರು. ನಿರ್ದೇಶಕ ಚುನಾವಣೆಯಲ್ಲಿ ಆಯ್ಕೆಯಾದ 13 ಸದಸ್ಯರು , ಒರ್ವ ನಾಮ ನಿರ್ದೇಶಿತ ಮತ್ತು ಆಡಳಿತಾಧಿಕಾರಿ ಸೇರಿ ಒಟ್ಟು 15 ಜನ ಮತದಾನ ಮಾಡಿದ್ದಾರೆ. ಇದರಲ್ಲಿ ಬಿಜೆಪಿಗೆ 8 ಮತಗಳು ಬಂದಿದ್ದು, ಗೆಲುವು ಖಚಿತ ಎಂದು ಬಿಜೆಪಿ ಬೆಂಬಲಿತ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕುಮಾರ ಜನಾಲಿ ಹಾಗೂ ಪ್ರಕಾಶ ತಪಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಜೇಯಕುಮಾರ ಸರನಾಯಕ ಕೂಡ ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನಾಮ ಪತ್ರ ಸಲ್ಲಿಸಿದ್ದು, ಸೂಚಕಕರು ಮತ್ತು ಅನುಮೋದಕರ ಸಹಿ ಇಲ್ಲದ ಕಾರಣ ನಾಮಪತ್ರ ರದ್ದಾಗಿದೆ. ಹೀಗಾಗಿ ಅವರು ಚುನಾವಣೆ ಸಮಯದಲ್ಲಿ ಗೈರಾಗಿದ್ದಾರೆ. ಇದರಿಂದ ಕಾಂಗ್ರೆಸ್ ಬೆಂಬಲಿತರಿಗೆ ಒಂದು ಮತ ಕಡಿಮೆ ಆಗಿದೆ.
ಚುನಾವಣೆ ಬಳಿಕ ವಿಧಾನ ಪರಿಷತ್ ಸದಸ್ಯ ಎಸ್.ಆರ್ ಪಾಟೀಲ್ ಮಾತನಾಡಿ, ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ. ನಾಳೆ ನ್ಯಾಯಾಲಯದಿಂದ ಆದೇಶ ಬಂದ ಮಾಹಿತಿ ತಿಳಿಯಲಿದೆ ಎಂದರು. ಮೇಲ್ನೋಟಕ್ಕೆ ಕಮಲಕ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಅಧಿಕೃತ ಫಲಿತಾಂಶದ ಬಳಿಕ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.