ಬಾಗಲಕೋಟೆ: ಪ್ರತಿಷ್ಠಿತ ಸಹಕಾರಿ ಕ್ಷೇತ್ರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಆಯ್ಕೆ ಚುನಾವಣೆಗೆ ಗುರುವಾರ ತೆರೆಬಿದ್ದಿದೆ. ಸಂಜೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಜನ ಕಾಂಗ್ರೆಸ್ ಬೆಂಬಲಿತ, ಐವರು ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದರು. ಇಬ್ಬರು ಹಾಲಿ ನಿರ್ದೇಶಕರಾದ ಡಾ. ದಡ್ಡೇನವರ, ಶಿವಾನಂದ ಉದುಪುಡಿ ಸೋಲು ಕಂಡರು. ಒಟ್ಟು 13 ಜನ ನಿರ್ದೇಶಕರ ಆಯ್ಕೆಯಲ್ಲಿ ಈಗಾಗಲೇ ಅಜಯ ಕುಮಾರ ಸರನಾಯಕ ಹಾಗೂ ನಂದಕುಮಾರ ಪಾಟೀಲರು ಪಿಕೆಪಿಎಸ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು 11 ಸ್ಥಾನಗಳಿಗೆ ಚುನಾವಣೆ ನಡೆಯಿತು.
ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಅಭ್ಯರ್ಥಿಗಳು ತಮ್ಮ ಮತದಾರರನ್ನು ವಾಹನದಲ್ಲಿ ಕರೆತಂದು ಮತ ಚಲಾಯಿಸುತ್ತಿದ್ದರು. ಇನ್ನೂ ಕೆಲವೊಂದು ಅಭ್ಯರ್ಥಿಗಳು ಮತದಾನ ಕೇಂದ್ರದ ಸಮೀಪ ನಿಂತು ಮತದಾರರಿಗೆ ಕೈ ಮುಗಿದು ಮತ ನೀಡುವಂತೆ ಬೇಡಿಕೊಂಡರು. ನವನಗರದ ಕಾಳಿದಾಸ ಸರ್ಕಲ್, ಬಸವೇಶ್ವರ ಎಂಜನೀಯರಿಂಗ್ ಕಾಲೇಜ್, ಸರ್ಕಾರಿ ಜಿಲ್ಲಾ ಆಸ್ಪತ್ರೆ, ಚಾಲುಕ್ಯ ಹೊಟೇಲ್ ಸಮೀಪ ಹಾಗೂ ಆರ್.ಟಿ.ಓ ಕಛೇರಿ ಸಮೀಪ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಈ ಮಾರ್ಗದಲ್ಲಿ ಸಂಜೆವರೆಗೂ ವಾಹನ ಸಂಚಾರ ಹಾಗೂ ಜನಸಂಚಾರವನ್ನು ನಿರ್ಬಂಧಿಸಲಾಗಿತ್ತು.
ವಿಜಯೋತ್ಸವ :
ಚುನಾವಣೆಯಲ್ಲಿ ವಿಜಯೋತ್ಸವ ಸಾಧಿಸುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಅಭ್ಯರ್ಥಿಗಳನ್ನು ಹೆಗಲಮೇಲೆ ಹೊತ್ತುಕೊಂಡು ಗುಲಾಲ ಎರಚಿಕೊಂಡು ಸಂಭ್ರಮ ಪಟ್ಟರು. ಇನ್ನೂ ಕೆಲವರು ಅಭ್ಯರ್ಥಿಗಳಿಗೆ ಸಿಹಿ ನೀಡಿ, ಹೂಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಾದಾಮಿ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಕುಮಾರ ಜನಾಲಿ (22) ಮತಗಳನ್ನು ಪಡೆದು ಜಯಶಾಲಿಯಾದರು.
ಹುನಗುಂದ ಪಿಕೆಪಿಎಸ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ವಿಜಯಾನಂದ ಕಾಶಪ್ಪನವರ (13), ಮುಧೋಳ ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ರಾಮಣ್ಣ ತಳೇವಾಡ(26)ಮತ, ಬೀಳಗಿ ಪಿಕೆಪಿಎಸ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಎಸ್.ಆರ್.ಪಾಟೀಲ(25), ಬಾದಾಮಿ ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಕುಮಾರ ಜನಾಲಿ (22), ಜಮಖಂಡಿ ಪಿಕೆಪಿಎಸ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಆನಂದ ನ್ಯಾಮಗೌಡ (24), ರಬಕವಿ-ಬನಹಟ್ಟಿ ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಿದ್ದು ಸವದಿ (18), ಇಳಕಲ್ ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಶಿವನಗೌಡ ಅಗಸಿಮುಂದಿನ (9), ಪಟ್ಟಣ ಬ್ಯಾಂಕ್, ಬಿನ್ ಶೇತ್ಕಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಪ್ರಕಾಶ ತಪಶೆಟ್ಟಿ (179), ನೇಕಾರ ಸಹಕಾರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ (ಕಾಂಗ್ರೆಸ್ ಬಂಡಾಯ) ಮುರಗೇಶ ಕಡ್ಲಿಮಟ್ಟಿ (39), ಕುರಿ ಉಣ್ಣೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಎಚ್.ವೈ.ಮೇಟಿ (34), ಇತರೆ ಸಹಕಾರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಆರ್.ನಿರಾಣಿ (235) ಮತಗಳನ್ನು ಪಡೆಯುವ ಮೂಲಕ ಬಿಡಿಸಿಸಿ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದರು.
ಚೀಟಿ ಎತ್ತಿ ಜಯಗಳಿಸಿದ ಕಾಶಪ್ಪನವರ
ಚೀಟಿ ಎತ್ತಿದಾಗ ಕಾಶಪ್ಪನವರ ಆಯ್ಕೆ ಹುನಗುಂದ ಪಿಕೆಪಿಎಸ್ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಬೆಂಬಲಿತ ವಿಜಯಾನಂದ ಕಾಶಪ್ಪನವರ 13 ಮತ ಹಾಗೂ ಬಿಜೆಪಿ ಬೆಂಬಲಿತ ವಿರೇಶ ಉಂಡೋಡಿ 13 ಮತಗಳನ್ನು ಪಡೆದುಕೊಂಡಾಗ ಇಬ್ಬರಿಗೂ ಸಮ ಮತಗಳು ಬಂದಾಗ ಚುನಾವಣಾಧಿಕಾರಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದಾಗ ವಿಜಯಾನಂದ ಕಾಶಪ್ಪನವರ ಆಯ್ಕೆಯಾದರು.
ಒಂದೇ ಮತಗಳ ಅಂತರ :
ಇಳಕಲ್ ಪಿಕೆಪಿಎಸ್ ಮತಕ್ಷೇತ್ರದಿಂದ ಶಿವನಗೌಡ ಅಗಸಿಮುಂದಿನ 9 ಹಾಗೂ ಮಹಾಂತೇಶ ನರಗುಂದ 8 ಮತಗಳನ್ನು ಪಡೆದಾಗ ಅಗಸಿಮುಂದಿನ 1 ಮತಗಳ ಅಂತರದಿಂದ ಗೆದ್ದು ಬೀಗಿದರು.
ಮರು ಎಣಿಕೆಗೆ ಪಟ್ಟು :
ಪಟ್ಟಣ ಬ್ಯಾಂಕ್ ಹಾಗೂ ಬಿನ್ ಶೇತ್ಕಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪ್ರಕಾಶ ತಪಶೆಟ್ಟಿ ಹಾಗೂ ಶಿವಾನಂದ ಉದುಪುಡಿ ನಡುವೆ ಬಾರಿ ಪೈಪೋಟಿ ಏರ್ಪಟ್ಟಿತು. 315 ಮತಗಳ ಚಲಾವಣೆಯಲ್ಲಿ 179 ತಪಶೆಟ್ಟಿಗೆ ಹಾಗೂ ಉದುಪುಡಿಗೆ 136 ಮತಗಳು ಬಿದ್ದಾಗ ತಪಶೆಟ್ಟಿಯವರು ಗೆದ್ದ ನಂತರ ಮರು ಎಣಿಕೆ ಮಾಡಬೇಕು ಎಂದು ಶಿವಾನಂದ ಉದುಪುಡಿಯವರು ಪಟ್ಟುಹಿಡಿದಾಗ ಚುನಾವಣಾ ಅಧಿಕಾರಿಗಳು ಒಪ್ಪಲಿಲ್ಲ.