ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಕೊರೊನಾ ಕಠಿಣ ನಿಯಮಗಳು ಪಾಲನೆಯಾಗುತ್ತಿಲ್ಲ.
ಐತಿಹಾಸಿಕ ಬಾದಾಮಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ. ಪ್ರವಾಸಿಗರು ಮಾಸ್ಕ್ ಧರಿಸದೆ ಬಾದಾಮಿ ಗುಹಾಂತರ ದೇಗುಲ ವೀಕ್ಷಣೆ ಮಾಡುತ್ತಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳತ್ತ ಪ್ರವಾಸಿಗರು ದಂಡು ಆಗಮಿಸುತ್ತಿದೆ. ಗುಂಪು ಗುಂಪಾಗಿ ಪ್ರವಾಸಿ ತಾಣ ವೀಕ್ಷಿಸುತ್ತಿರುವ ಪ್ರವಾಸಿಗರು ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ಪ್ರವಾಸಿ ತಾಣ ವೀಕ್ಷಿಸುತ್ತಿದ್ದಾರೆ.
ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಇತರೆ ಸ್ಥಳಗಳಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿಕೊಳ್ಳುವಂತೆ ಆದೇಶ ನೀಡಿದರೂ ಪ್ರವಾಸಿಗರು ಕ್ಯಾರೇ ಎನ್ನದಿರುವುದು ಆತಂಕ ಮೂಡಿಸುವಂತಿದೆ.