ಬಾಗಲಕೋಟೆ: ಕೊರೊನಾ ವೈರಸ್ಗೆ ಔಷಧ ಇಲ್ಲದ ಕಾರಣ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಆಯುರ್ವೇದ ಔಷಧ ಬಳಕೆಯಿಂದಾಗಿ ಕಡಿಮೆ ಆಗುವ ಸಾಧ್ಯತೆ ಇದೆ ಎಂಬುದು ಚರ್ಚೆ ಸಹ ಆಗುತ್ತಿದೆ.
ಕೊರೊನಾ ವೈರಸ್ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯುರ್ವೇದ ಔಷಧ ಬಳಸುವಂತೆ ಆಯುಷ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಜಿಲ್ಲೆಯ ಆಯುಷ್ ಇಲಾಖೆಯ ಅಧಿಕಾರಿ ಡಾ. ಮಲ್ಲಣ್ಣ ತೋಟದ ಮಾತನಾಡಿ, ಪ್ರತಿ ನಿತ್ಯ ಕಷಾಯವನ್ನು ಮಾಡಿ ಕುಡಿಯುವ ಮೂಲಕ ಕೊರೊನಾ ತಡೆಯಬಹುದು. ಅದರ ಜೊತೆಗೆ ಕೇಂದ್ರ ಸರ್ಕಾರದ ಆಯುಷ್ಯ ಮಂತ್ರಾಲಯದಿಂದ ಬಂದಿರುವ ಆಯುರ್ವೇದ ಔಷಧಿಗಳನ್ನು ಕಿಟ್ ಮಾಡಿ, ಈಗಾಗಲೇ 33 ಸಾವಿರ ಜನರಿಗೆ ತಲುಪಿಸಲಾಗಿದೆ. ಅರ್ಸೆನಿಕ್ ಆಲ್ಬಂ 30 ಮಾತ್ರೆಗಳು, ಸಂಶಮನಿ ವಟಿ -250 ಮಿ.ಗ್ರಾಂ ಮಾತ್ರೆಗಳು ಹಾಗೂ ಅರ್ಕ ಎ ಅಜೀಬ್ (ಯುನಾನಿ), ಅರ್ಸೆನಿಕ್ ಆಲ್ಬಂ (ಹೋಮಿಯೋಪತಿ) ಈ ಔಷಧೀಯ ಮಹತ್ವ ಹಾಗೂ ಅದನ್ನು ಸೇವಿಸುವ ವಿಧಾನವನ್ನು ತಿಳಿಸಿಕೊಟ್ಟರು.
ಈ ಔಷಧವನ್ನು ಕೊರೊನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆಯರಿಗೆ, ಪೊಲೀಸ್ ಸಿಬ್ಬಂದಿಗೆ ಸೇರಿದಂತೆ ವಿವಿಧ ವೃತ್ತಿಯಲ್ಲಿರುವರಿವಗೂ ವಿತರಣೆ ಮಾಡಿದ್ದಾರೆ. ಕೊರೊನಾದಿಂದ ಯಾರೂ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಲ್ಲಿ ಕೊರೊನಾ ಸೋಂಕು ಹರಡುವುದಿಲ್ಲ. ಕೊರೊನಾ ಬರದಂತೆ ಇಂತಹ ಆಯುರ್ವೇದ ಔಷಧವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಣ್ಣ ತೋಟದ ತಿಳಿಸಿದ್ದಾರೆ.