ಬಾಗಲಕೋಟೆ: ಕೊರೊನಾ ಲಾಕ್ಡೌನ್ ಇನ್ನೇನು ಹೆಚ್ಚಿನಂಶ ಸಡಿಲವಾಗಿದ್ದರೂ ಒಂದಿಷ್ಟು ವರ್ಗದ ಜನ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಟೋ ಚಾಲಕರು ಕನಿಷ್ಟ ಸಂಪಾದನೆಯೂ ಇಲ್ಲದೆ ಮನೆಗೆ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ ನಗರದಲ್ಲಿಯೇ ಸುಮಾರು 1500 ಟಂಟಂ ವಾಹನಗಳಿದ್ದು, ಇಡೀ ಜಿಲ್ಲೆಯಲ್ಲಿಯೇ 5000 ಕ್ಕೂ ಹೆಚ್ಚು ಅಟೋಗಳು, ಟಂಟಂ ವಾಹನಗಳಿವೆ. ಲಾಕ್ಡೌನ್ಗೂ ಮೊದಲು ಇವರೆಲ್ಲರಿಗೂ ದಿನಕ್ಕೆ ಕನಿಷ್ಟ 4 ಪಾಳೆಯಾದರೂ ದೊರಕುತ್ತಿತ್ತು. ಆದರೆ, ಇದೀಗ ಎರಡು ಪಾಳೆ ಸಿಗುವುದೂ ಕಷ್ಟವಾಗಿದ್ದು, ಹೆಚ್ಚೆಂದರೆ ದಿನಕ್ಕೆ 200 ರೂಪಾಯಿಗಳವರೆಗೆ ಮಾತ್ರವೇ ಆದಾಯ ಬರುತ್ತದೆ. ಇದು ಗಾಡಿಗೆ ಇಂಧನ ಭರಿಸಲು ಸಾಕಾಗುತ್ತದೆ.
ಮೊದಲು ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಾರುಕಟ್ಟೆಗಳಿಗೆ ಹೋಗುವವರು ಆಟೋಗಳನ್ನು ಹೆಚ್ಚು ಬಳಸುತ್ತಿದ್ದರು. ಆದರೆ, ಈಗ ಹೆಚ್ಚು ಮಂದಿ ಸ್ವಂತ ವಾಹನಗಳನ್ನೇ ಅವಲಂಬಿಸುತ್ತಿದ್ದು, ಆಟೋ ಚಾಲಕರು ಪ್ರಯಾಣಿಕರಿಲ್ಲದೆ ಪರದಾಡುತ್ತಿದ್ದಾರೆ.
ಸರ್ಕಾರ ನೀಡಿರುವ ಐದು ಸಾವಿರ ಪರಿಹಾರ ಧನ ಕೆಲವೇ ಕೆಲವು ಚಾಲಕರಿಗೆ ಮಾತ್ರ ಅನ್ವಯವಾಗಿದೆ. ಅತ್ತ ಬ್ಯಾಂಕಿನಿಂದ ಸಾಲ ಪಾವತಿ ಮಾತ್ರ ಮೂರು ತಿಂಗಳವರೆಗೆ ಮುಂದೂಡಿಕೆಯಾಗಿದ್ದು, ವಾಹನ ವಿಮಾ ಯೋಜನೆಯು ಮೂರು ತಿಂಗಳವರೆಗೆ ಮುಂದೂಡಿಕೆ ಮಾಡಬೇಕು ಎಂದು ಅಟೋ ಚಾಲಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.