ಬಾಗಲಕೋಟೆ: ನಾಟಕ ಹಾಗೂ ಚಲನಚಿತ್ರದಲ್ಲಿ ನಟಿಸಿ ಹೆಸರು ವಾಸಿಯಾಗಿರುವ ಗುಡೂರ ಮಮತಾ ತೀವ್ರ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಜನಿಸಿ, ಬಾಲ ಕಲಾವಿದೆಯಾಗಿ ಬೆಳೆದು ನಾಟಕ ಹಾಗೂ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿ ಖ್ಯಾತರಾಗಿದ್ದ ಮಮತಾ ಕಳೆದ ಒಂದು ವರ್ಷದಿಂದ ಮೆದುಳಿನ ರಕ್ತ ಸ್ರಾವ ಅನಾರೋಗ್ಯಕ್ಕೆ ತುತ್ತಾಗಿ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿ ಆಗದೆ ಇಂದು ಮೃತಪಟ್ಟಿದ್ದಾರೆ. ಚಿತ್ರ ನಟ ದಿವಂಗತ ಸುಧೀರ, ಧೀರೇಂದ್ರ ಗೋಪಾಲ ಸೇರಿದಂತೆ ಇತರ ಪ್ರಮುಖ ಖಳನಾಯಕ ಜೊತೆಗೆ ಅಭಿನಯ ಮಾಡಿದ್ದಾರೆ. ಗೌಡರ ಗದ್ದಲ ಎಂಬ ನಾಟಕದಲ್ಲಿ ಚಿತ್ರ ನಟ ಸುಧೀರ್ ಅವರ ಜೊತೆ ನಟಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ನಂತರ ರೆಬಲ್ ಸ್ಟಾರ್ ಅಂಬರೀಶ್ ಅವರ ಚಿತ್ರಗಳಾದ ಆಶಾ, ಗೆದ್ದ ಮಗ ಸೇರಿದಂತೆ ಇತರ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸಿದ್ದರು. ಇಂತಹ ಕಲಾವಿದರಿಗೆ 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ಸಮಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಾಟಕ ಕಂಪನಿ ನಡೆಸುವುದರ ಜೊತೆಗೆ ಸ್ವತಃ ಕಲಾವಿದೆಯಾಗಿ ಅಭಿನಯಿಸುವ ಮೂಲಕ ಪೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನ ಯುಗದ ಭರಾಟೆಯಿಂದಾಗಿ ನಾಟಕ ಕಂಪನಿಗಳು ನಶಿಸಿ ಹೋದ ಪರಿಣಾಮ ಚಿಕಿತ್ಸೆಗೆ ಹೆಚ್ಚು ಹಣ ಇಲ್ಲದೆ ಅವರ ಇಡೀ ಕುಟುಂಬ ಪರದಾಡುವಂತಾಗಿತ್ತು. ಸಂಘ ಸಂಸ್ಥೆಗಳು ಹಾಗೂ ಇತರರಿಂದ ಸಹಾಯ ಪಡೆದುಕೊಂಡು ಚಿಕಿತ್ಸೆ ವೆಚ್ಚ ಭರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಇಂದು ಮೃತಪಟ್ಟಿದ್ದು, ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ. ಮಮತಾ ಅವರ ನಿಧನಕ್ಕೆ ಎಲ್ಲಾ ಕಲಾವಿದರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: Singer Surinder Shinda: ಜನಪ್ರಿಯ ಪಂಜಾಬಿ ಗಾಯಕ ಸುರಿಂದರ್ ಶಿಂದಾ ಇನ್ನಿಲ್ಲ