ಬಾಗಲಕೋಟೆ : 'ಇಷ್ಟಾರ್ಥ ಸಿದ್ಧಿಸುವ ಮಠ' ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ಸಿದ್ದೇಶ್ವರ ಮಠಕ್ಕೆ ಆಂಧ್ರಪ್ರದೇಶದ ಶಾಸಕರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಈ ಮಠಕ್ಕೆ ಬಂದು ಪ್ರಾರ್ಥಿಸಿ, ತೆಂಗಿನಕಾಯಿ ಇಟ್ಟು ಬಂದರೆ ಸಂಕಲ್ಪ ಸಿದ್ದಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳುತ್ತಾರೆ. ಈವರೆಗೆ ಬರೀ ಕರ್ನಾಟಕದ ರಾಜಕಾರಣಿಗಳು ಬರುತ್ತಿದ್ದರು. ಇದೀಗ ನೆರೆಯ ಆಂಧ್ರದ ಶಾಸಕರು ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಅಕ್ಟೋಬರ್, ನವೆಂಬರ್ನಲ್ಲಿ ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂಭವ ಇದೆ. ಈ ಹಿನ್ನೆಲೆ ಆಂಧ್ರಪ್ರದೇಶದ ಅಧೋನಿ ಮತಕ್ಷೇತ್ರ ಶಾಸಕ ಸಾಯಿ ಪ್ರಸಾದ ರೆಡ್ಡಿ ಹಾಗೂ ಅವರ ಬೆಂಬಲಿಗರು ಆಗಮಿಸಿ, ಸಿದ್ದನಕೊಳ್ಳ ಮಠದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರ ಗದ್ದುಗೆ ಹಾಗೂ ದೇವಾಲಯದದಲ್ಲಿ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದ ತೆಂಗಿನಕಾಯಿ ಇಟ್ಟಿದ್ದಾರೆ.
ಚಾಲುಕ್ಯರಿಂದ ನಿರ್ಮಾಣ : ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಸಿದ್ದನಕೊಳ್ಳದ ಮಠವು, ಕಲಾ ಪೋಷಕರ ಮಠವಾಗಿದೆ. ಚಾಲುಕ್ಯರ ಆಡಳಿತದಲ್ಲಿ ನಿರ್ಮಾಣ ಆಗಿರುವ ಐಹೊಳೆಯಿಂದ ಏಳು ಕೀಲೋಮೀಟರ್ ದೂರದಲ್ಲಿರುವ ಸಿದ್ದನಕೊಳ್ಳವು ಪ್ರಕೃತಿ ಸೌಂದರ್ಯದ ಮಧ್ಯೆ ಕಂಗೊಳಿಸುತ್ತಿದೆ. ಚಾಲುಕ್ಯರ ಆಡಳಿತ ಸಮಯದಲ್ಲಿ ಸಾಧು ಸಂತರು,ಸಿದ್ದಿ ಪುರುಷರು ಇಲ್ಲಿ ವಾಸವಾಗಿ,ತಪಸ್ಸು ಮಾಡಿ ಪವಾಡ ಮಾಡುವ ಸ್ಥಳವಾಗಿತ್ತು ಎನ್ನುತ್ತದೆ ಇತಿಹಾಸ.
ಪಕ್ಷಾತೀತ ಹಾಗೂ ಜಾತ್ಯತೀತವಾದ ಭಕ್ತರ ಮಠ : ಇದೇ ಸಮಯದಲ್ಲಿ ಸ್ಥಳೀಯ ಡಾ.ಶಿವಕುಮಾರ್ ಸ್ವಾಮೀಜಿ ಮಾತನಾಡಿ, ಈ ಮಠಕ್ಕೆ ಯಾರೂ ರಾಜಕೀಯದವರಾಗಿ ಬರಲ್ಲ. ಮಠದ ಭಕ್ತರಾಗಿ ಬರುತ್ತಾರೆ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಈ ಮಠವು ಭಕ್ತರ ಮಠವಾಗಿದೆ. ಭಕ್ತರಿಂದ ಬಂದ ದಾನ ಧರ್ಮ,ಹಣ, ಹಣ್ಣು-ಹಂಪಲು,ಆಹಾರ ಧಾನ್ಯ ಹಾಗೂ ಚಿನ್ನಾಭರಣವನ್ನು ಮರಳಿ ಭಕ್ತರಿಗೆ ದಾನವಾಗಿ ನೀಡುವುದು ವಿಶೇಷ.
ಹೀಗಾಗಿ, ಆಂಧ್ರಪ್ರದೇಶದಿಂದ ಬಂದಿರುವ ಶಾಸಕರು ಹಾಗೂ ಅವರ ಬೆಂಬಲಿಗರಿಗೆ ಭಕ್ತರು ನೀಡಿರುವ ಚಿನ್ನದ ಹಾಗೂ ಬೆಳ್ಳಿಯ ಉಂಗುರವನ್ನು ಕಾಣಿಕೆಯಾಗಿ ಆಶೀರ್ವಾದ ರೂಪದಲ್ಲಿ ನೀಡಿ,ಇನ್ನೂ ರಾಜಕೀಯದಲ್ಲಿ ಹೆಚ್ಚಿನ ಸ್ಥಾನದಲ್ಲಿ ಬೆಳೆಯುವಿರಿ ಎಂದು ಆಶೀರ್ವಾದ ಮಾಡಿ ಸನ್ಮಾನಿಸಿದರು.