ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸೂರ್ಯಕಾಂತಿ ಬೆಳೆಯಲ್ಲಿ ಪೊಮಾಪ್ಸಿಸ್ ಅಂಗಮಾರಿ ಶಿಲೀಂಧ್ರ ರೋಗದ ಬಾಧೆ ಕಂಡು ಬಂದ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಶೇ. 10 ರಿಂದ 15 ರಷ್ಟು ಈ ರೋಗದ ಲಕ್ಷಣಗಳು ಕಂಡು ಬಂದಿದ್ದು. ಕೆಲವು ಗಿಡಗಳ ಕಾಂಡಗಳ ಮೇಲೆ ಕಂದು ಬಣ್ಣದ ಉದ್ದನೇಯ ಅಂಗಮಾರಿ ಚುಕ್ಕೆಯ ಲಕ್ಷಣಗಳಿವೆ. ತೀವ್ರ ಭಾದಿತ ಗಿಡಗಳು ಮದ್ಯದಲ್ಲಿ ಬಿದ್ದ ಲಕ್ಷಣಗಳಿವೆ ಮತ್ತು ಮುರಿದ ಕಾಂಡಗಳು ಟೊಳ್ಳಾಗಿ ಕಪ್ಪು ಬಣ್ಣದ ಇತರ ಸೂಕ್ಷ್ಮ ಜೀವಿಗಳ ಬೆಳವಣಿಗೆಯಾಗಿದೆ. ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಹಾಗೂ ತುಂತುರು ಮಳೆಯಿಂದ ಈ ತರಹದ ಲಕ್ಷಣಗಳು ಕಂಡು ಬಂದಿದೆ.
ರೋಗದ ಹತೋಟಿಗಾಗಿ ಮೆಂಕೋಜಬ್ 2 ಗ್ರಾಂ, ಪ್ರೊಪಿಕೊನೊಜಿಲ್ 1 ಮಿ.ಲೀ. ಅಥವಾ ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ, ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗದ ಲಕ್ಷಣಗಳು ತೀವ್ರವಾಗಿದ್ದಲ್ಲಿ 15 ದಿವಸದ ನಂತರ ಮತ್ತೊಮ್ಮೆ ಈ ಸಿಂಪರಣೆಯನ್ನು ಮಾಡಲು ತಿಳಿಸಿದರು. ತಂಡದಲ್ಲಿ ಕೃಷಿ ವಿಜ್ಞಾನಿಗಳಾದ ಅರುಣ ಆರ್ ಸತರೆಡ್ಡಿ, ಅರ್ಜುನ್ ಹಲಗತ್ತಿ ಮತ್ತು ಕೃಷಿ ಅಧಿಕಾರಿಗಳು ಇದ್ದರು