ಬಾಗಲಕೋಟೆ: ರಾಜ್ಯದಲ್ಲಿ ಐಟಿ ದಾಳಿ ಮುಂದುವರೆದಿದ್ದು, ಪ್ರತಿನಿತ್ಯ ಐಟಿ ಅಧಿಕಾರಿಗಳು ಒಬ್ಬರಲ್ಲ ಒಬ್ಬರಿಗೆ ಶಾಕ್ ನೀಡುತ್ತಲೇ ಇದ್ದಾರೆ. ಇಂದು ಕೂಡ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಆಪ್ತರ ಮೇಲೆ ಐಟಿ ರೇಡ್ ನಡೆದಿದೆ.
ಡಿಸಿಸಿ ಬ್ಯಾಂಕ್ನಲ್ಲಿ ಎಫ್ಡಿಸಿ ಆಗಿ ಕೆಲಸ ಮಾಡುತ್ತಿರುವ ಯಾಸೀನ್ ತುಂಬರಮಟ್ಟಿ ಹಾಗೂ ಆರೀಫ್ ಕಾರ್ಲೇಕರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಹಳೇ ಪೇಟೆಯಲ್ಲಿರುವ ಯಾಸೀನ್ ಅವರ ಮನೆ ಹಾಗೂ ವಿವೇಕಾನಂದ ನಗರದಲ್ಲಿ ಆರೀಫ್ ಕಾರ್ಲೇಕರ್ ಅವರ ಮನೆ ಮೇಲೆ ದಾಳಿ ಮಾಡಿದ ಆದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಯಾಸೀನ್ ನವನಗರದ ಡಿಸಿಸಿ ಬ್ಯಾಂಕ್ನಿಂದ ಒಂದು ಕೋಟಿ ನಗದು ಹಣ ಡ್ರಾ ಮಾಡಿಕೊಂಡು ತೆರಳುವಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಇಬ್ಬರನ್ನೂ ಐಟಿ ಅಧಿಕಾರಿಗಳು ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ. ಮತದಾನ ಇನ್ನು ಎರಡು ದಿನ ಬಾಕಿ ಇರುವಾಗಲೇ ಐಟಿ ದಾಳಿ ನಡೆದಿದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಇನ್ನು 2ನೇ ಹಂತದ ಚುನಾವಣೆ ಮಂಗಳವಾರ ನಡೆಯಲಿದೆ. ಈ ನಡುವೆ ಮತ್ತೆ ಕೆಲ ರಾಜಕಾರಣಿಗಳ ಆಪ್ತರಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.