ಬಾಗಲಕೋಟೆ: ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಹಾವಳಿ ಶುರುವಾದ ಬೆನ್ನೆಲ್ಲೇ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದ್ದು, ಸೂಕ್ತ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ 2 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯಲಾಯಿತು.
ನವನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಡಿಹೆಚ್ಒ ಅವರು, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿದಂತೆ ಕೋವಿಡ್ ಚಿಕಿತ್ಸೆ ನೀಡುತ್ತಿರುವ 39 ಮಂದಿ ವೈದ್ಯರೊಂದಿಗೆ ಮಾಹಿತಿ ಪಡೆದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸೂಚನೆ ನೀಡಿದರು.
ಇದೇ ಸಮಯದಲ್ಲಿ ಕೋವಿಡ್ ನಿರ್ವಹಣೆ ವೈದ್ಯರ ಅಹವಾಲು ಕೇಳಿ ಜೊತೆಗೆ ಬ್ಲಾಕ್ ಫಂಗಸ್ ಬಗ್ಗೆ ಸರ್ಕಾರದ ಕಟ್ಟಳೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸರ್ಕಾರದ ಆದೇಶಾನುಸಾರ ಯಾವ ರೀತಿ ಚಿಕಿತ್ಸೆ ನೀಡಬೇಕು?, ಹೇಗೆ ನೀಡಬೇಕು?, ಫಂಗಸ್ ಬಗ್ಗೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಬ್ಲಾಕ್ ಫಂಗಸ್ ಬಂದರೆ ಬದುಕುಳಿಯುವುದೇ ಕಷ್ಟ. ಹಾಗಾಗಿ ರೋಗ ಬರದಂತೆ ಎಚ್ಚರ ವಹಿಸಿ, ಜೀವ ಉಳಿಸುವುದು ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಮುರಗಿ ಹಾಗೂ ಡಿಹೆಚ್ಒ ಡಾ. ಅನಂತ ದೇಸಾಯಿ ಎಲ್ಲಾ ವೈದ್ಯರಿಗೆ ಸೂಚನೆ ನೀಡಿದ್ದಾರೆ.