ಬಾಗಲಕೋಟೆ: ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೋವಿಡ್ ನಿಯಂತ್ರಣದ ಸಲುವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಪ್ರತಿ ದಿನ 25 ಸಾವಿರ ಲಸಿಕೆ ನೀಡುವ ಜೊತೆಗೆ ಬ್ಲಾಕ್ ಫಂಗಸ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿರ್ಣಾಯಕವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂಬ ಚಿಂತನೆ ನಡೆಸಲಾಗಿದೆ. ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್ ಎತ್ತರಕ್ಕೆ ಏರಿಸುವ ಕುರಿತು ಅತಿ ಶೀಘ್ರದಲ್ಲಿ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆಗೆ ಒಂದು ದಿನ ಪೂರ್ಣ ಸಭೆ ನಡೆಸಲಾಗುವುದು. ಈ ಭಾಗದಲ್ಲಿ ಒಂಬತ್ತು ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಈ ಬಗ್ಗೆ ಮಹಾರಾಷ್ಟ್ರದ ನೀರಾವರಿ ಸಚಿವರು ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತನಾಡಿ ದೆಹಲಿಗೆ ಹೋಗಿ ಎರಡು ರಾಜ್ಯಗಳು ಸೇರಿ ನೋಟಿಫಿಕೇಷನ್ ಪಡೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
ಯುಕೆಪಿ ಎರಡನೇಯ ಹಂತ ,ಯಾದಗಿರಿ ಜಿಲ್ಲೆಯ ಸನ್ನತಿ ನೀರಾವರಿ ಯೋಜನೆಗೆ ಸುಮಾರು 4-5 ಸಾವಿರ ಕೋಟಿ ರೂಪಾಯಿಗಳು ವೆಚ್ಚ ಆಗಲಿದ್ದು, ಆದಷ್ಟು ಬೇಗ ಕೇಂದ್ರ ಸರ್ಕಾರದ ನೆರವು ಪಡೆದುಕೊಂಡು ಶೀಘ್ರ ಈ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಯುಕೆಪಿ ಹಂತ ಮೂರು ಅಭಿವೃದ್ಧಿಗೆ ಯಾವ ಮಾನದಂಡ ಮಾಡಬೇಕು ಎಂಬುದನ್ನು ಅಧಿಕಾರಿಗಳಿಗೆ ಸೂಚನೆ ನೀಡಿ, ವರದಿ ನೀಡುವಂತೆ ತಿಳಿಸಲಾಗಿದೆ ಎಂದರು.
ಇದನ್ನೂ ಓದಿ: ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ, ನನ್ನ ಕ್ಷೇತ್ರದ ಜನರಿಗಾಗಿ ಎಂಥಾ ಹೋರಾಟಕ್ಕೂ ಸಿದ್ಧ : ವಿನಯ್ ಕುಲಕರ್ಣಿ
ಹಿನ್ನೀರಿನಿಂದ ಮುಳಗಡೆ ಆಗಿರುವ ಪುನರ್ ವಸತಿ, ಪುನರ್ ನಿರ್ಮಾಣ ಮಾಡಿರುವ ಕೇಂದ್ರಗಳಿಗೆ, ಈ ಹಿಂದೆ ನೀರಾವರಿ ಸಚಿವರಾಗಿದ್ದ ಸಮಯದಲ್ಲಿ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಹಣ ನೀಡಿದ್ದೇನೆ. ಈಗ ಮತ್ತೆ ನೂರು ಕೋಟಿ ರೂ. ನೀಡಿ, ಪುನರ್ ವಸತಿ ಕೇಂದ್ರಗಳ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.