ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗದೆ ಸದ್ಯದ ಮಟ್ಟಿಗೆ ಸಮಾಧಾನ ತಂದಿದೆ. ಬದಲಿಗೆ ಸೋಂಕು ಹೊಂದಿದ್ದ ಢಾಣಕಶಿರೂರ ಗ್ರಾಮದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಹೌದು, ಕೊರೊನಾ ಸೋಂಕು ತಗುಲಿದ್ದ ಜಿಲ್ಲೆಯ ಢಾಣಕಶಿರೂರ ಗ್ರಾಮದ ಇಬ್ಬರು ಗುಣಮುಖರಾದ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಯಿಂದ ಸಂಜೆ ಡಿಸ್ಚಾರ್ಜ್ ಮಾಡಲಾಯಿತು. 26 ವರ್ಷದ ವ್ಯಕ್ತಿ ಪಿ-683 ಮತ್ತು 55 ವರ್ಷದ ಮಹಿಳೆ ಪಿ-702 ಕೋವಿಡ್ನಿಂದ ಗುಣಮುಖರಾದವರು. ಡಿಸ್ಚಾರ್ಜ್ ಆದ ಇಬ್ಬರು ಸೇರಿ ಸದ್ಯ ಗುಣಮುಖರಾದವರ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 76 ಆಗಿದೆ.
ಡಿಸ್ಚಾರ್ಜ್ ಅದವರಿಗೆ ಆಸ್ಪತ್ರೆಯಿಂದ ಪ್ರಮಾಣಪತ್ರ ನೀಡಿ, ಚಪ್ಪಾಳೆ ತಟ್ಟಿ ಜಿಲ್ಲಾ ಆಸ್ಪತ್ರೆಯಿಂದ ಬೀಳ್ಕೊಡಲಾಯಿತು. ಜಿಲ್ಲೆಯಿಂದ ಕಳುಹಿಸಲಾದ 253 ಸ್ಯಾಂಪಲ್ಗಳ ಪೈಕಿ 107 ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ. ಮೂರು ಸ್ಯಾಂಪಲ್ಗಳು ರಿಜೆಕ್ಟ್ ಆಗಿದ್ದು, ಇನ್ನೂ 146 ಸ್ಯಾಂಪಲ್ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಹಾಗೇ ಹೊಸದಾಗಿ ಮತ್ತೆ 140 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.