ಸೋನಿಪತ್: ಹರಿಯಾಣದ ಕುಸ್ತಿಪಟು ರವಿ ಕುಮಾರ್ ದಹಿಯಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ದಹಿಯಾ ತಾಯಿ ಕಣ್ಣೀರು ಹಾಕಿದ್ದಾರೆ. ಫೈನಲ್ನಲ್ಲಿ ಮಗ ನೀಡುತ್ತಿದ್ದ ಪ್ರದರ್ಶನವನ್ನ ಟಿವಿಯಲ್ಲಿ ವೀಕ್ಷಣೆ ಮಾಡ್ತಿದ್ದ ರವಿ ದಹಿಯಾ ತಾಯಿ, ಆತನ ಸಾಧನೆ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.
ಮಗನ ಸಾಧನೆಯಿಂದ ಸತೃಪ್ತಗೊಂಡಿರುವ ಅವರು ಕಣ್ಣೀರು ಹಾಕಿದ್ದಾರೆ. 8 ವರ್ಷದವನಿದ್ದಾಗಿನಿಂದಲೂ ನನ್ನ ಮಗ ಕುಸ್ತಿ ಆಡುತ್ತಿದ್ದು, ಮುಂದಿನ ಸಲ ಖಂಡಿತವಾಗಿ ಚಿನ್ನದ ಪದಕ ಗೆಲ್ಲುತ್ತಾನೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿಯಾಣದ ನಾಹರಿ ಗ್ರಾಮದಲ್ಲಿ ಇದೀಗ ಸಂಭ್ರಮ ಮನೆ ಮಾಡಿದ್ದು, ರವಿ ಆಗಮನಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರವಿ ಸಾಧನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಹರಿಯಾಣ ಸರ್ಕಾರ 4 ಕೋಟಿ ರೂ. ನಗದು, ಸರ್ಕಾರಿ ಕೆಲಸ ಹಾಗೂ ಪ್ಲಾಟ್ ನೀಡುವುದಾಗಿ ಘೋಷಣೆ ಮಾಡಿದೆ.
2015ರಲ್ಲಿ ಜೂನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರವಿ ಗಾಯಗೊಂಡು ಕುಸ್ತಿಯಿಂದ ದೂರ ಉಳಿದಿದ್ದರು. ಸುಮಾರು ಮೂರು ವರ್ಷಗಳ ಕಾಲ ಹೊರಗೆ ಉಳಿದಿದ್ದ ರವಿ, 2018ರಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದರು.
ಇದಾದ ಬಳಿಕ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಅನೇಕ ಪದಕ ಗೆದ್ದಿರುವ ಅವರು 2015ರ ಜೂನಿಯರ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ 2018ರ ಅಂಡರ್ 23 ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಹಾಗೂ 2019ರ ಹಿರಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಹಾಗೂ 2020 & 21ರಲ್ಲಿ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿದ್ದಾರೆ.
ಇದನ್ನೂ ಓದಿರಿ: ಕಳೆದ 15-20 ವರ್ಷದಲ್ಲಿ ಇಂತಹ ಪ್ರದರ್ಶನ ನೋಡಿಲ್ಲ.. 'ಈಟಿವಿ ಭಾರತ' ಜೊತೆ ಧ್ಯಾನಚಂದ್ ಮಗನ ಮನದಾಳ!
ದಹಿಯಾ 57 ಕೆಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯದಲ್ಲಿ ರಷ್ಯಾದ(ROC) ಜೌರ್ ಉಗುವ್ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ 4-7 ಅಂತರದಿಂದ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.