ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಮಣಿಸಿದ್ದಾರೆ.
ಚೀನಾದ ಜಿಯಾವೊ ವಿರುದ್ಧ ಮೊದಲ ಗೇಮ್ ಅನ್ನು 21-13ರಿಂದ ಗೆದ್ದ ಸಿಂಧು 1-0 ಮುನ್ನಡೆ ಸಾಧಿಸಿದರು. 2ನೇ ಗೇಮ್ನಲ್ಲೂ ಪ್ರಾಬಲ್ಯ ಮುಂದುವರೆಸಿದ ವಿಶ್ವ ಚಾಂಪಿಯನ್, 21-15 ರಿಂದ ಮಣಿಸಿದರು.
ಈ ಹಿಂದೆ ರಿಯೋ ಒಲಿಂಪಿಕ್ಸ್ನಲ್ಲಿ ಪಿ.ವಿ. ಸಿಂಧು ದೇಶಕ್ಕೆ ಬೆಳ್ಳಿ ಪದಕ ಜಯಿಸಿದ್ದರು. ಈ ಬಾರಿ ಸೆಮಿಫೈನಲ್ನಲ್ಲಿ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ಜು ಯಿಂಗ್ ವಿರುದ್ಧ ಸಿಂಧು 18-21 ಹಾಗೂ 12-21 ಸೆಟ್ಗಳ ಅಂತರದಿಂದ ನಿರಾಸೆ ಅನುಭವಿಸಿದ್ದರು.
2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ನಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿ ಸಾಧನೆ ಮಾಡಿದ್ದರು. ಈ ಬಾರಿ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕುವ ಮೂಲಕ ಬ್ಯಾಡ್ಮಿಂಟನ್ ವಿಭಾಗದಲ್ಲಿ ಒಲಿಂಪಿಕ್ಸ್ನಲ್ಲಿ ಸತತವಾಗಿ ಎರಡು ಬಾರಿ ಪದಕ ಗೆದ್ದಿರುವ ಮೊದಲ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.
ಶನಿವಾರ ನಡೆದಿದ್ದ ಪಂದ್ಯದಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದರು. ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ಜು ಯಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ 18-21 ಹಾಗೂ 12-21 ಸೆಟ್ಗಳ ಅಂತರದಿಂದ ಪರಾಭವಗೊಂಡಿದ್ದರು.