ಟೋಕಿಯೋ: ಜಪಾನ್ನ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ 9ನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಮಹಾ ಕ್ರೀಡಾಕೂಟದಲ್ಲಿ ಈಗಾಗಲೆ ಒಂದು ಪದಕ ಗೆದ್ದಿದ್ದರೆ, ಮತ್ತೊಂದು ಪಕದ ಕೂಡ ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಮೂಲಕ ಖಚಿತವಾಗಿದೆ. 9ನೇ ದಿನ ಬಾಕ್ಸರ್ ಅಮಿತ್ ಪಂಗಲ್ , ಪಿವಿ ಸಿಂಧು ಸೇರಿದಂತ ಸ್ಟಾರ್ ಆಥ್ಲೀಟ್ಗಳ ಕಣಕ್ಕಿಳಿಯಲಿದ್ದು ಭಾರತಕ್ಕೆ ಹೆಚ್ಚಿನ ಪದಕ ಬರುವ ನಿರೀಕ್ಷೆಯಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ 9ನೇ ದಿನ ಕಣಕ್ಕಿಳಿಯುವ ಭಾರತೀಯ ಕ್ರೀಡಾಪಟುಗಳು ಮತ್ತು ಅವರು ಭಾಗವಹಿಸುವ ಕ್ರೀಡೆಗಳ ವಿವರ ಇಲ್ಲಿದೆ ನೋಡಿ.
ಅತನು ದಾಸ್: ಅರ್ಚರಿ
ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ದಾಸ್ ಸ್ಥಳೀಯ ತಕಹರು ಫುರುಕವಾ ವಿರುದ್ಧ 16ರ ಹಂತದ ಪಂದ್ಯವನ್ನಾಡಲಿದ್ದಾರೆ. ದಾಸ್ ಅರ್ಚರಿ ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿರುವ ಏಕೈಕ ಅರ್ಚರಿ ಪ್ಲೇಯರ್ ಆಗಿದ್ದಾರೆ.
ಅಮಿತ್ ಪಂಘಲ್ - ಬಾಕ್ಸಿಂಗ್
ವಿಶ್ವದ ನಂಬರ್ 1 ಬಾಕ್ಸರ್ ಅಮಿತ್ ಪಂಘಲ್ ಒಲಿಂಪಿಕ್ಸ್ನ ತಮ್ಮ ಮೊದಲ ಪಂದ್ಯದಲ್ಲಿ ಬೈ ಪಡೆದಿದ್ದರು. ಇದೀಗ 52 ಕೆಜಿ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಶನಿವಾರ ಕೊಲಂಬಿಯಾದ ಯುಬರ್ಜೆನ್ ಹರ್ನಿ ಮಾರ್ಟಿನೆಜ್ ರಿವಾಸ್ ಅವರನ್ನು ಎದುರಿಸಲಿದ್ದಾರೆ.
2019ರ ಏಷ್ಯನ್ ಗೇಮ್ಸ್, 2019ರ ವಿಶ್ವ ಚಾಂಪಿಯನ್ಸ್ಶಿಪ್ 2021ರ ಗವರ್ನರ್ ಕಪ್ನಲ್ಲಿ ಪದಕ ಗೆದ್ದಿರುವ ಪಂಘಲ್ ಮೇಲೆ ಪದಕದ ಬರವಸೆಯಿದೆ.
ಪೂಜಾರಾಣಿ -ಬಾಕ್ಸಿಂಗ್
ಭಾರತೀಯ ಬಾಕ್ಸರ್ ಪೂಜಾ ರಾಣಿ (75 ಕೆಜಿ) ಬುಧವಾರ ನಡೆದ 16ರ ಹಂತದ ಪಂದ್ಯದಲ್ಲಿ ಅಲ್ಜೀರಿಯಾದ ಇಚ್ರಾಕ್ ಚೈಬ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಶನಿವಾರ ಪೂಜಾ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಕಿಯಾನ್ ಲಿ ಅವರನ್ನು ಮಣಿಸಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸುವ ಅವಕಾಶವಿದೆ.
ಪಿವಿ ಸಿಂಧು - ಬ್ಯಾಡ್ಮಿಂಟನ್
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಯಮಗುಚಿ ವಿರುದ್ಧ 21-13, 22-20ರಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರುವ ವಿಶ್ವ ಚಾಂಪಿಯನ್ ಪಿವಿ ಸಿಂಧು ಇಂದಿನ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೀನಾ ತೈಪೆಯ ತಾಯ್ ಜು ಯಿಂಗ್ ಸವಾಲನ್ನು ಎದುರಿಸಲಿದ್ದಾರೆ. ತೈಪೆ ಆಟಗಾರ್ತಿ ಸಿಂಧು ವಿರುದ್ಧ 13-5 ಗೆಲುವಿನ ಮುನ್ನಡೆ ಹೊಂದಿದ್ದಾರೆ. ಆದರೆ ವಿಶ್ವ ಕ್ರೀಡಾಕೂಟದಲ್ಲಿ ಒಂದೇ ಒಂದು ಗೇಮ್ ಕಳೆದುಕೊಳ್ಳದ ಪಿವಿ ಸಿಂಧು ಇಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿ ಚಿನ್ನದ ಪದಕದ ಸುತ್ತಿಗೆ ತೇರ್ಗಡೆಯಾಗುವ ವಿಶ್ವಾಸದಲ್ಲಿದ್ದಾರೆ.
ಕಮಲ್‌ಪ್ರೀತ್ ಕೌರ್ : ಡಿಸ್ಕಸ್ ಥ್ರೋ
ಡಿಸ್ಕಸ್ ಥ್ರೋ ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಕಮಲ್‌ಪ್ರೀತ್ ಕೌರ್ ಮತ್ತು ಸೀಮಾ ಪುನಿಯಾ ಟೋಕಿಯೊದಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. ಕೌರ್ ಪಟಿಯಾಲದಲ್ಲಿ ಕಳೆದ ಮಾರ್ಚ್ನಲ್ಲಿ ನಡೆದ ಫೆಡರೇಷನ್ ಕಪ್ನಲ್ಲಿ 65 ಮೀಟರ್ ಗಡಿ ದಾಟಿದ ಮೊದಲ ಮಹಿಳಾ ಥ್ರೋವರ್ ಎನಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಒಲಿಂಪಿಕ್ಸ್ ಫಿಲ್ಡ್ ಈವೆಂಟ್ನಲ್ಲಿ ಐತಿಹಾಸಿಕ ಪದಕ ಬರುವುದೇ ಕಾದು ನೋಡಬೇಕಿದೆ.