ಟೋಕಿಯೊ: ಪುರುಷರ ಶ್ರೇಯಾಂಕದ ಆರ್ಚರಿ ಪಂದ್ಯದಲ್ಲಿ ತರುಂದೀಪ್ ರಾಯ್ 6-4 ಅಂಕಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 1/32 ಎಲಿಮಿನೇಷನ್ ಪಂದ್ಯದಲ್ಲಿ ಉಕ್ರೇನ್‌ನ ಒಲೆನ್ಕ್ಸಿ ಹನ್ಬಿನ್ರನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಹಾಕಿಯಲ್ಲಿ ಭಾರತದ ವನಿತೆಯರಿಗೆ ಸತತ 3ನೇ ಸೋಲು:
ಎ ಗುಂಪಿನ ಹಾಕಿ ಪಂದ್ಯದಲ್ಲಿ ಭಾರತದ ಹಾಕಿ ಮಹಿಳಾ ತಂಡವು ಹಾಲಿ ಚಾಂಪಿಯನ್ ಗ್ರೇಟ್ ಬ್ರಿಟನ್ ವಿರುದ್ಧ 1-4 ಗೋಲು ಅಂತರದಲ್ಲಿ ಸೋಲು ಕಂಡಿದೆ. ಹಾಕಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಭಾರತದ ವನಿತೆಯರಿಗೆ ಒಲಿಂಪಿಕ್ಸ್‌ನಲ್ಲಿ ಇದು ಸತತ ಮೂರನೇ ಸೋಲು.
ಭಾರತದ ಪರ 23ನೇ ನಿಮಿಷದಲ್ಲಿ ಶರ್ಮಿಲಾ ದೇವಿ ಏಕೈಕ ಗೋಲು ಹೊಡೆದರು. ನಾಕೌಟ್ ಹಂತಕ್ಕೆ ಅರ್ಹತೆ ಗಿಟ್ಟಿಸಬೇಕಾದರೆ ಇನ್ನುಳಿದ ಎರಡೂ ಪಂದ್ಯಗಳನ್ನು ಭಾರತ ಗೆಲ್ಲಲೇಬೇಕಾಗಿದೆ.
ಭಾರತದ ಮಹಿಳಾ ಹಾಕಿ ತಂಡ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿತ್ತು. ಜರ್ಮನಿ ಎದುರು 0-2 ಗೋಲುಗಳಿಂದ ಸೋಲು ಅನುಭವಿಸಿತ್ತು. ವಿಶ್ವ ನಂ1 ತಂಡ ನೆದರ್ಲ್ಯಾಂಡ್ ವಿರುದ್ಧವೂ 1-5 ಗೋಲುಗಳಿಂದ ಭಾರತ ಮುಖಭಂಗ ಅನುಭವಿಸಿತ್ತು.
ರೋವರ್ಸ್ನಲ್ಲಿ ಭಾರತಕ್ಕೆ ಹಿನ್ನಡೆ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಲೈಟ್ವೈಟಿಂಗದದ ಡಬಲ್ ಸ್ಕಲ್ ಪಂದ್ಯದಲ್ಲಿ ಭಾರತೀಯ ರೋವರ್‌ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ. ಈ ಮೂಲಕ ಫೈನಲ್ ಕನಸು ಹುಸಿಯಾಗಿದೆ. ಆದರೆ ಅರ್ಜುನ್ ಮತ್ತು ಅರವಿಂದ್ ಜೋಡಿ ಸೆಮಿಫೈನಲ್ ತಲುಪುವ ಮೂಲಕ ಭಾರತೀಯ ರೋವರ್ಸ್ ಮಾಡಿದ ಅತ್ಯುತ್ತಮ ಒಲಿಂಪಿಕ್ ಪ್ರದರ್ಶನ ಎಂದು ಗುರುತಿಸಲಾಗಿದೆ.