ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಇತಿಹಾಸ ರಚನೆ ಮಾಡಿರುವ ಭಾರತದ ಅಥ್ಲೀಟ್ಸ್ ನೀರಜ್ ಚೋಪ್ರಾಗೆ ಭಾರತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಭರ್ಜರಿಯಾಗಿ ಬರಮಾಡಿಕೊಳ್ಳಲಾಯಿತು. ಇದಾದ ಬಳಿಕ ಅಶೋಕ್ ಹೋಟೆಲ್ನಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಮಾತನಾಡಿರುವ ನೀರಜ್ ಚೋಪ್ರಾ, ಸಂತಸ ಹೊರಹಾಕಿದ್ದಾರೆ.
ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದಾಗಿನಿಂದಲೂ ಅದನ್ನ ಜೇಬಿನಲ್ಲಿಟ್ಟುಕೊಂಡು ತಿರುಗಾಡುತ್ತಿದ್ದೇನೆ. ಸರಿಯಾಗಿ ಊಟ ಹಾಗೂ ನಿದ್ದೆ ಮಾಡಿಲ್ಲ. ಈ ಸ್ವರ್ಣ ಪದಕ ನನಗೆ ಮಾತ್ರವಲ್ಲ. ಇಡೀ ದೇಶಕ್ಕೆ ಸೇರಿದ್ದು ಎಂದರು. ಟೋಕಿಯೋದಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯಿತ್ತು. ಜೊತೆಗೆ ತುಂಬಾ ಕಠಿಣವಾಗಿತ್ತು. ಫೈನಲ್ಗೆ ಅರ್ಹತೆ ಪಡೆದುಕೊಂಡ ಬಳಿಕ ಇದು ನನ್ನ ಜೀವನದ ಅತ್ಯುತ್ತಮ ಅವಕಾಶ,ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದೆ. ನಮ್ಮ ಪ್ರತಿಸ್ಪರ್ಧಿಗಳನ್ನ ನೋಡಿ ಯಾವಾಗಲೂ ಹಿಂದೇಟು ಹಾಕಬಾರದು. ನನ್ನ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು ಎಂದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಜಾವಲಿನ್ ಥ್ರೋದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಅಥ್ಲೀಟ್ಸ್ನಲ್ಲಿ ಮೊದಲ ಬಾರಿಗೆ ದೇಶಕ್ಕೆ ಪದಕ ಗೆದ್ದುಕೊಡುವಲ್ಲಿ ನೀರಜ್ ಯಶಸ್ವಿಯಾಗಿದ್ದು, ಇದೀಗ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿರಿ: ಚಿನ್ನದ ಪದಕ ದೇಶಕ್ಕೆ ಅರ್ಪಿಸಿದ ನೀರಜ್.. ಅಭಿನಂದನಾ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಅಥ್ಲೀಟ್ಸ್!
ಈ ಹಿಂದಿನ ಸ್ಪರ್ಧೆಗಳ ಸಂದರ್ಭದಲ್ಲಿ ನೀರಜ್ ಚೋಪ್ರಾ ಉದ್ದವಾದ ಕೂದಲು ಬಿಡುತ್ತಿದ್ದರು. ಆದರೆ, ಈ ಸಲ ಅವುಗಳನ್ನ ಕತ್ತರಿಸಿದ್ದರು. ಇದರ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಸ್ಪರ್ಧೆಗಳಲ್ಲಿ ಭಾಗಿಯಾಗಿರುವ ಅನೇಕ ಸಂದರ್ಭಗಳಲ್ಲಿ ಅವು ಕಣ್ಣಿನಲ್ಲಿ ಬೀಳುವುದು ಅಥವಾ ಅದರಿಂದ ಬೆವರು ಬರುವುದು ಆರಂಭವಾಗಿತ್ತು. ಈ ಮಹತ್ವದ ಸ್ಪರ್ಧೆಯಲ್ಲಿ ಅಂತಹ ತೊಂದರೆಯಾಗಬಾರದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಂಡು, ಕತ್ತರಿಸಿದೆ. ಯಶಸ್ಸು ಸಾಧಿಸಿದರೆ, ತದನಂತರ ಸ್ಟೈಲ್ ಮಾಡಬಹುದು ಎಂದರು.