ಟೋಕಿಯೋ: ಜಪಾನ್ನ ಟೋಕಿಯೋದಲ್ಲಿನ ಒಂಲಿಪಿಕ್ಸ್ನಲ್ಲಿ ಭಾರತದ ಯೋಧ ಇತಿಹಾಸ ರಚಿಸಿದ್ದಾರೆ. ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾ ತಮ್ಮ ಸಂತಸ ಹಂಚಿಕೊಂಡಿದ್ದು, ಅಲ್ಲಿಂದಲೇ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ಈ ವರ್ಷದಲ್ಲಿ ಮೇಲಿಂದ ಮೇಲೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿರುವುದು ನನಗೆ ಅತ್ಯಂತ ಸಹಕಾರಿಯಾಗಿದ್ದು, ಈ ಹಿಂದೆ ಆಡಿರುವ 2-3 ಅಂತಾರಾಷ್ಟ್ರೀಯ ಸ್ಪರ್ಧೆಗಳು ನನಗೆ ತುಂಬಾ ಸಹಾಯ ಮಾಡಿವೆ ಎಂದಿದ್ದಾರೆ. ಹಿಂದಿನ ಮೂರು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಒಲಿಂಪಿಕ್ಸ್ನಲ್ಲಿ ಯಾವುದೇ ರೀತಿಯ ಒತ್ತಡ ಅನುಭವಿಸಲಿಲ್ಲ ಎಂದಿರುವ ಅವರು, ಇಂದಿನ ಫೈನಲ್ನ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಅದು ಬಹಳ ಸಹಕಾರಿಯಾಯಿತು ಎಂದಿದ್ದಾರೆ.
ಇದನ್ನೂ ಓದಿರಿ: ಒಲಿಂಪಿಕ್ಸ್ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಅಥ್ಲೀಟ್ಸ್...ಪದಕ ವಿಜೇತರಿಗೆ ಬಿಸಿಸಿಐ ಬಹುಮಾನ
ಟೋಕಿಯೋ ಒಲಿಂಪಿಕ್ಸ್ನಲ್ಲಿ ನನ್ನ ಮೇಲೆ ಯಾವುದೇ ಒತ್ತಡವಿರಲಿಲ್ಲ. ಹೀಗಾಗಿ ಉತ್ತಮ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. 120 ವರ್ಷಗಳ ಬಳಿಕ ಭಾರತಕ್ಕೆ ಅಥ್ಲೀಟ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿರುವ ಚೋಪ್ರಾ, 87.58 ಮೀಟರ್ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಅವರ ಸಾಧನೆಗೆ ಇದೀಗ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.