ಮುಂಬೈ : ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಟಿ-74 ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದು ಕೊಟ್ಟಿದ್ದಾರೆ. ಇವರು 2.07 ಮೀಟರ್ನಷ್ಟು ಎತ್ತರ ಹಾರುವಲ್ಲಿ ಯಶಸ್ವಿಯಾಗಿದ್ದು, ಹೊಸ ಏಷ್ಯನ್ ರೆಕಾರ್ಡ್ ಬರೆದಿದ್ದಾರೆ.
ಈ ಸಾಧನೆಗೆ ಕಾರಣ ಗೂಗಲ್ ಅಂತಾ ಸ್ವತಃ ಪ್ರವೀಣ್ ಕುಮಾರ್ ಹೇಳಿಕೊಂಡಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್ ಬಗ್ಗೆ ಯಾವುದೇ ಜ್ಞಾನವಿಲ್ಲದ ತನಗೆ, ಈ ಕ್ರೀಡೆಯ ಬಗ್ಗೆ ತಿಳಿಯಲು ಗೂಗಲ್ಅವಲಂಬಿಸಿದ್ದೆ ಎಂದು ಹೇಳಿದ್ದಾರೆ.
"ನಾನು Googleನಲ್ಲಿ ಎತ್ತರ ಜಿಗಿತದ ವಿಡಿಯೋಗಳನ್ನು ನೋಡುತ್ತಿದ್ದೆ. ಮತ್ತು ಅದರಿಂದ ಹೆಚ್ಚು ಕಲಿಯಲು ಪ್ರಯತ್ನಿಸುತ್ತಿದ್ದೆ. ಮೊದಲು ನನಗೆ ಕಲಿಸಲು ಯಾರೂ ಇರಲಿಲ್ಲ. ಆದರೆ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತರಬೇತುದಾರ ಡಾ. ಸತ್ಯಪಾಲ್ ಅವರ ಪರಿಚಯವಾಯಿತು. ನಂತರ ಅವರು ನನಗೆ ತರಬೇತಿ ನೀಡಲು ಒಪ್ಪಿದರು ಎಂದು ಅವರು ಹೇಳಿದ್ದಾರೆ.
"ನಾನು ವಾಲಿಬಾಲ್ ಆಟಗಾರನಾಗಿದ್ದೆ. ಆದರೆ, 2016ರಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಮತ್ತು ಎತ್ತರ ಜಿಗಿತದ ಬಗ್ಗೆ ತಿಳಿದುಕೊಂಡೆ. ಗೂಗಲ್‌ನಲ್ಲಿ ವಿಡಿಯೋಗಳನ್ನು ನೋಡುವ ಮೂಲಕ ನನ್ನ ಆರಂಭಿಕ ಜ್ಞಾನ ಪಡೆದುಕೊಂಡೆ. ನಾನು 2018ರಲ್ಲಿ ನಾನು ತರಬೇತುದಾರ ಡಾ. ಸತ್ಯಪಾಲ್ ಅವರನ್ನ ಭೇಟಿ ಮಾಡಿದೆ. ಅವರು ನನ್ನ ಬಗ್ಗೆ ಸಂಪೂರ್ಣ ಅರಿತುಕೊಂಡು ನಂತರ ಅವರು ನನಗೆ ತರಬೇತಿ ನೀಡಲು ಒಪ್ಪಿದರು "ಎಂದು ಕುಮಾರ್ ಹೇಳಿದರು.
ಈವರೆಗೆ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಒಟ್ಟು 11 ಪದಕಗಳನ್ನ ಮುಡಿಗೇರಿಸಿಕೊಂಡಿದೆ. ಪದಕ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ. ಇತ್ತ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.