ಟೋಕಿಯೋ: 41 ವರ್ಷಗಳ ನಂತರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಇತಿಹಾಸ ರಚನೆ ಮಾಡಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ಮೇಲೆ ಸವಾರಿ ಮಾಡಿರುವ ಭಾರತದ ಪುರುಷರ ತಂಡ 5-4 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ಕಂಚಿನ ಪದಕಕ್ಕೆ ಮುತ್ತಿಕ್ಕಿರುವ ಪುರುಷರ ಹಾಕಿ ತಂಡ ಇಂದು ರಾತ್ರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದೆ. ಬದಲಾಗಿ ಪದಕದೊಂದಿಗೆ ಇಡೀ ರಾತ್ರಿ ನಿದ್ರೆ ಮಾಡಲು ಮುಂದಾಗಿದೆ. ಇದರ ಬಗ್ಗೆ ಮಾತನಾಡಿರುವ ತಂಡದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್, ನಾವು ಯಾವುದೇ ರೀತಿಯ ಸಂಭ್ರಮಾಚರಣೆ ಮಾಡುತ್ತಿಲ್ಲ. ಎಲ್ಲರೂ ಕೈಯಲ್ಲಿ ಪದಕ ಹಿಡಿದುಕೊಂಡು ನಿದ್ರೆ ಮಾಡಲು ನಿರ್ಧರಿಸಿದ್ದೇವೆ. ನಾಳೆ ಸಂಭ್ರಮಾಚರಣೆ ಮಾಡಲು ಎಲ್ಲರೂ ನಿರ್ಧರಿಸಿದ್ದು, ಪದಕ ನಮ್ಮ ಕೈಯಲ್ಲಿ ಹಿಡಿದುಕೊಂಡು ನಿದ್ರೆ ಮಾಡಲು ನಾವೆಲ್ಲರೂ ನಿರ್ಧಾರ ಮಾಡಿದ್ದೇವೆ ಎಂದರು.
ಇದನ್ನೂ ಓದಿರಿ: 'ಐ ಡೋಂಟ್ ಕೇರ್'... ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಟೋಕಿಯೋ ಒಲಿಂಪಿಕ್ಸ್ನಲ್ಲಿ ತಂಡ ಗೆಲುವು ಸಾಧಿಸುವಲ್ಲಿ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇಂದಿನ ಪಂದ್ಯದಲ್ಲೂ ಎದುರಾಳಿ ಹೊಡೆದಿರುವ ಅನೇಕ ಗೋಲು ತಡೆದು ಭಾರತ ಮೇಲುಗೈ ಸಾಧಿಸುವಂತೆ ಮಾಡಿದ್ದಾರೆ.
ಭಾರತ ಹಾಕಿ ತಂಡ ಕಳೆದ 41 ವರ್ಷಗಳಿಂದ ಯಾವುದೇ ರೀತಿಯ ಪದಕ ಗೆದ್ದಿರಲಿಲ್ಲ. ಆದರೆ, ಈ ಸಲ ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಲೀಗ್ ಹಂತದಿಂದಲೇ ಉತ್ತಮ ಪ್ರದರ್ಶನ ನೀಡಿ, ಎದುರಾಳಿಗಳಿಗೆ ತಿರುಗೇಟು ನೀಡಿತ್ತು. ಆದರೆ, ಸೆಮಿಫೈನಲ್ನಲ್ಲಿ ಸೋತಿದ್ದ ತಂಡ, ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ, ಜಯ ದಾಖಲಿಸಿದೆ.