ಮೆಲ್ಬೋರ್ನ್: ಈ ಋತುವಿನ ಮೊದಲ ಗ್ರ್ಯಾಂಡ್ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಗೆ ಕೊರೊನಾ ಶಾಪವಾಗಿ ಪರಿಣಮಿಸಿದೆ. ಆಸ್ಟ್ರೇಲಿಯನ್ ಓಪನ್ ನಲ್ಲಿ ಭಾಗಿಯಾಗಲು ಬಂದಿದ್ದ ಮತ್ತೆ ಮೂವರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಈ ಗ್ರ್ಯಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾವಳಿಗೂ ಮುನ್ನ 10 ಜನರಿಗೆ ಕೊರೊನಾ ತಗುಲಿದಂತಾಗಿದೆ.
ವಿಕ್ಟೋರಿಯಾ ರಾಜ್ಯ ತುರ್ತು ಸೇವೆಗಳ ಸಚಿವ ಲಿಸಾ ನೆವಿಲ್ಲೆ ಬುಧವಾರ ಕೋವಿಡ್ ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂವರಲ್ಲಿ ಒಬ್ಬ ಆಟಗಾರನಿಗೆ ಕೊರೊನಾ ತಗುಲಿದ್ದು, ಎಲ್ಲರನ್ನೂ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿದ್ದು, ಇವರ ಸಂಪರ್ಕದಲ್ಲಿದವರಿಗೂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.
ಮೂರು ವಿಮಾನಗಳಲ್ಲಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಕೆಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿಕಟ ಸಂಪರ್ಕ ಎಂದು ಪರಿಗಣಿಸಿ 72 ಆಟಗಾರರನ್ನು 14 ದಿನಗಳ ಕಾಲ ತಮ್ಮ ಹೋಟೆಲ್ ಕೋಣೆಗಳಲ್ಲಿ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.
ಓದಿ : ಆಸ್ಟ್ರೇಲಿಯಾ ಓಪನ್: ವಿಮಾನದಲ್ಲಿ ಆಗಮಿಸಿದ ನಾಲ್ವರಲ್ಲಿ ಕೋವಿಡ್ ಸೋಂಕು.. 72 ಆಟಗಾರರು ಕ್ವಾರಂಟೈನ್
ಸೋಂಕು ಪತ್ತೆಯಾದವರ ಪೈಕಿ ಆಟಗಾರರಿಲ್ಲ, ವಿಮಾನ ಹತ್ತುವುದಕ್ಕೂ ಮೊದಲು ಎಲ್ಲರೂ ಕೂಡ ನೆಗೆಟಿವ್ ವರದಿ ಪಡೆದುಕೊಂಡಿದ್ದರು ಎಂದು ಆಸ್ಟ್ರೇಲಿಯಾ ಓಪನ್ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 8ರಿಂದ ಪ್ರಾರಂಭವಾಗುವ ಟೂರ್ನಿಗೆ ಕೇವಲ ಮೂರು ವಾರಗಳ ಕಾಲಾವಕಾಶವಿದ್ದು, ಕ್ವಾರಂಟೈನ್ ಸಮಯದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗದಿರುವುದಕ್ಕೆ ಕೆಲ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.