ನೂರ್ ಸುಲ್ತಾನ್: ದಿವಿಜ್ ಶರಣ್ ಕ್ವಾರ್ಟರ್ ಫೈನಲ್ನಲ್ಲಿ ಮತ್ತು ರೋಹಣ್ ಬೋಪಣ್ಣ 16ರ ಹಂತದ ಪಂದ್ಯದಲ್ಲಿ ಸೋಲುವ ಮೂಲಕ ಆಸ್ತಾನಾ ಓಪನ್ನಿಂದ ಹೊರಬಿದ್ದಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಿವಿಜ್ ತಮ್ಮ ಬ್ರಿಟಿಷ್ ಪಾರ್ಟನರ್ ಲ್ಯೂಕ್ ಬ್ಯಾಂಬ್ರಿಡ್ಜ್ ಅವರ ಜೊತೆಗೂಡಿ ಆಸ್ಟ್ರೇಲಿಯಾ ಓಪನ್ನ ರನ್ನರ್ ಅಪ್ ಮ್ಯಾಕ್ಸ್ ಪರ್ಸೆಲ್ ಮತ್ತು ಲ್ಯೂಕ್ ಸೆವಿಲ್ಲೆ ವಿರುದ್ಧ ಸೆಣಸಾಡಿ ಸೋಲುಕಂಡರು. ದಿವಿಜ್ ಜೋಡಿ 3-6, 5-7 ರ ಸೆಟ್ಗಳ ಅಂತರದಲ್ಲಿ ಪರಾಭವ ಹೊಂದಿದರು.
ಮೊದಲ ಸೆಟ್ನಲ್ಲಿ ಸೋತರು 2ನೇ ಸೆಟ್ನಲ್ಲಿ 5-4ರಲ್ಲಿ ಮುನ್ನಡೆ ಸಾಧಿಸಿ ಸೆಟ್ ಪಾಯಿಂಟ್ ಹತ್ತಿರಕ್ಕೆ ಬಂದಿದ್ದರಾದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆದರೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರಿಂದ 45 ಎಟಿಪಿ ರೇಟಿಂಗ್ ಪಾಯಿಂಟ್ ಮತ್ತು 3230 ಡಾಲರ್ ಬಹುಮಾನ ಮೊತ್ತ ಪಡೆದರು.
ಆದರೆ, ಮತ್ತೊಬ್ಬ ಭಾರತೀಯ ರೋಹನ್ ಬೋಪಣ್ಣ - ಡ್ಯಾನಿಶ್ ಜೋಡಿ ಕಠಿಣ ಪೈಪೋಟಿಯ ಹೊರತಾಗಿಯೂ ಮೊದಲ ಸುತ್ತಿನ ಪಂದ್ಯದಲ್ಲಿ ಮಾರ್ಸೆಲೊ ಅರೆವಾಲೊ ಹಾಗೂ ಟೊಮಿಸ್ಲಾವ್ ವಿರುದ್ಧ 6-7(5), 7-6(3), 10-5ರ ಅಂತರದಲ್ಲಿ ಸೋಲು ಕಂಡರು. ಈ ಜೋಡಿ ಯಾವುದೇ ರೇಟಿಂಗ್ ಅಂಕ ಪಡೆಯದಿದ್ದರೂ, 2,650 ಡಾಲರ್ ಮೊತ್ತ ಪಡೆದರು.