ಹೈದರಾಬಾದ್ : ತಾಯಿಯಾದ ಬಳಿಕ ಅಂತಾರಾಷ್ಟ್ರೀಯ ಟೆನ್ನಿಸ್ಗೆ ಯಶಸ್ವಿಯಾಗಿ ಮರಳಿದ್ದ ಭಾರತೀಯ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ ಅವರಿಗೆ ಫೆಡ್ ಕಪ್ ಹಾರ್ಟ್ ಅವಾರ್ಡ್ ದೊರೆತಿದೆ.
ಅಂತಾರಾಷ್ಟ್ರೀಯ ಟೆನ್ನಿಸ್ ಫೆಡೆರೇಷನ್ ನೀಡುವ ಈ ಪ್ರಶಸ್ತಿಯನ್ನು ಏಷ್ಯಾ ಒಷಿನಿಯಾ ವಿಭಾಗದಲ್ಲಿ ಮೂಗುತಿ ಸುಂದರಿ ಸಾನಿಯಾ ಪಡೆದುಕೊಂಡಿದ್ದಾರೆ. ಅಲ್ಲದೆ ಐಟಿಎಫ್ನ ಈ ಪ್ರಶಸ್ತಿ ಪಡೆದ ಭಾರತದ ಮೊದಲ ಆಟಗಾರ್ತಿ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
ಏಷ್ಯಾ ಒಷಿನಿಯಾ ವಿಭಾಗದಲ್ಲಿ ಚಲಾವಣೆಯಾಗಿದ್ದ 16,985 ಮತಗಳ ಪೈಕಿ ಸಾನಿಯಾ 10,000 ಮತ ಪಡೆಯುವ ಮೂಲಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಪ್ರಶಸ್ತಿಯಿಂದ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
"ಮೊದಲ ಭಾರತೀಯಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾ ಹೆಮ್ಮೆ. ಈ ಪ್ರಶಸ್ತಿಯನ್ನು ದೇಶಕ್ಕೆ ಹಾಗೂ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಇದು ನನಗೆ ಸಿಗಲು, ನನಗೆ ಮತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ದೇಶಕ್ಕೆ ಮತ್ತಷ್ಟು ಗರಿಮೆಯನ್ನು ತಂದುಕೊಡಲು ಭವಿಷ್ಯದಲ್ಲೂ ಪ್ರಯತ್ನಿಸುತ್ತೇನೆ" ಎಂದು ಸಾನಿಯಾ ಹೇಳಿದ್ದಾರೆ ಎಂದು ಆಲ್ ಇಂಡಿಯಾ ಟೆನ್ನಿಸ್ ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು 6 ಬಾರಿಯ ಗ್ರ್ಯಾಂಡ್ಸ್ಲಾಮ್ ವಿನ್ನರ್ ಸಾನಿಯಾ, ಈ ಪ್ರಶಸ್ತಿಯಿಂದ ಬಂದಂತಹ 2000 ಅಮೆರಿಕನ್ ಡಾಲರ್ ಮೊತ್ತವನ್ನು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಸಾನಿಯಾ ಮಿರ್ಜಾ ಫೆಡ್ಕಪ್ಗೆ ನಾಲ್ಕು ವರ್ಷಗಳ ನಂತರ ಮರಳಿದರೂ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. 2018ರ ಅಕ್ಟೋಬರ್ನಲ್ಲಿ ತಾಯಿಯಾದ ಬಳಿಕ ಈ ವರ್ಷದ ಜನವರಿಯಲ್ಲಿ ಟೆನ್ನಿಸ್ಗೆ ಮರಳಿದ್ದ ಸಾನಿಯಾ ಹೋಬರ್ಟ್ ಓಪನ್ ಡಬಲ್ಸ್ ಕಿರೀಟ ಜಯಸಿದ್ದರು.