ಬೆರ್ನ್(ಸ್ವಿಟ್ಜರ್ಲೆಂಡ್): ಸ್ವಿಸ್ ಸರ್ಕಾರ ರೋಜರ್ ಫೆಡರರ್ ಚಿತ್ರ ಮುದ್ರಣದ ನಾಣ್ಯ ಬಿಡುಗಡೆ ಮಾಡುವ ಮೂಲಕ ಟೆನ್ನಿಸ್ ದಿಗ್ಗಜನಿಗೆ ವಿಶೇಷ ರೀತಿಯಲ್ಲಿ ಗೌರವ ಸಮರ್ಪಿಸಿದೆ.
ಸ್ವಿಸ್ ಸರ್ಕಾರ 20 ಫ್ರಾಂಕ್ ಬೆಳ್ಳಿ ನಾಣ್ಯದಲ್ಲಿ ರೋಜರ್ ಫೆಡರರ್ ಚಿತ್ರವನ್ನು ಮುದ್ರಿಸಿ ಬಿಡುಗಡೆ ಮಾಡಿದೆ. ಈ ಮೂಲಕ ಸ್ವಿಟ್ಜರ್ಲೆಂಡ್ ಇತಿಹಾಸದಲ್ಲಿ ಜೀವಂತವಿರುವ ವ್ಯಕ್ತಿಯ ಹೆಸರಲ್ಲಿ ಸರ್ಕಾರ ನಾಣ್ಯ ಬಿಡುಗಡೆ ಮಾಡಿರುವುದು ಇದೇ ಮೊದಲಾಗಿದೆ.
20 ಗ್ರ್ಯಾಂಡ್ಸ್ಲಾಮ್ ಗೆದ್ದು ಟೆನ್ನಿಸ್ ಜಗತ್ತಿನ ಚಕ್ರವರ್ತಿಯಾಗಿರುವ ಫೆಡರರ್ ದೇಶದ ಯಶಸ್ವಿ ಕ್ರೀಡಾಪಡುವಾಗಿದ್ದಾರೆ. ಅವರೊಬ್ಬ ಸ್ವಿಟ್ಜರ್ಲೆಂಡ್ನ ಪರಿಪೂರ್ಣ ರಾಯಭಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಸ್ವಿಸ್ ಸರ್ಕಾರ ಮುಂದಿನ ವರ್ಷ ಫೆಡರರ್ ಹೆಸರಿನಲ್ಲಿ ಮತ್ತೆ 50 ಫ್ರಾಂಕ್ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಈ ನಾಣ್ಯದಲ್ಲಿ 'ಹೆಡ್ಸ್' ಕಡೆ ಫೆಡರರ್ ಒಂದು ಕೈಯಲ್ಲಿ ರಾಕೆಟ್ ಹಿಡಿದಿರುವ ಚಿತ್ರವನ್ನು ಮುದ್ರಿಸಲಾಗಿದೆ. ಸದ್ಯಕ್ಕೆ 95 ಸಾವಿರ ನಾಣ್ಯಗಳನ್ನು ತಯಾರಿಸಲು ಆದೇಶ ನೀಡಲಾಗಿದೆ. ಒಂದು ನಾಣ್ಯಕ್ಕೆ 30 ಸ್ವಿಸ್ ಫ್ರಾಂಕ್ ಖರ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ. ಈ ನಾಣ್ಯಗಳು ಮುಂದಿನ ವರ್ಷ ಜನವರಿಯಿಂದ ಚಾಲನೆಗೆ ಬರಲಿವೆ.