ನ್ಯೂಯಾರ್ಕ್: ಕೊರೊನಾ ವೈರಸ್ ಕಾರಣದಿಂದ ಕಳೆದ ಒಂದು ವರ್ಷಗಳಿಂದ ಹಲವು ಕ್ರೀಡಾಕೂಟಗಳು ಪ್ರೇಕ್ಷಕ ರಹಿತವಾಗಿ ನಡೆದಿದ್ದವು. ಇದೀಗ ಮುಂದಿನ ವಾರ ನ್ಯೂಯಾರ್ಕ್ನಲ್ಲಿ ನಡೆಯುವ ಯುಎಸ್ ಓಪನ್ಗೆ ಕ್ರೀಡಾಂಗಣದಲ್ಲಿ ಸಂಪೂರ್ಣ ಪ್ರೇಕ್ಷಕರ ಅವಕಾಶ ನೀಡಲಾಗಿದೆ. ಜೊತೆಗೆ ಮಾಸ್ಕ್ ಮತ್ತು ಕೋವಿಡ್ ಲಸಿಕೆ ಪಡೆದಿರುವುದಕ್ಕೆ ಯಾವುದೇ ಪುರಾವೆಗಳು ಅಗತ್ಯವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ಸೋಮವಾರದಿಂದ ನ್ಯೂಯಾರ್ಕ್ನಲ್ಲಿ ಯುಎಸ್ ಗ್ರ್ಯಾಂಡ್ ಸ್ಲಾಮ್ ಆರಂಭವಾಗಲಿದೆ. ನ್ಯೂಯಾರ್ಕ್ ನಗರದ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರೋಟೋಕಾಲ್ಗಳನ್ನು ಟೂರ್ನಮೆಂಟ್ ಆಯೋಜಕರು ಅಳವಡಿಸಿದ್ದಾರೆ. 12 ವರ್ಷ ಮೇಲ್ಪಟ್ಟವರು ಕೇವಲ ಒಂದು ಡೋಸ್ ಲಸಿಕೆ ಪಡೆದಿದ್ದರೆ ಸಾಕು ಈ ಟೂರ್ನಮೆಂಟ್ ವೀಕ್ಷಣೆ ಮಾಡಬಹುದಾಗಿದೆ. ಆದರೆ, ಎರಡೂ ಡೋಸ್ ಪಡೆದಿರುವ ಯಾವುದೇ ಪ್ರಮಾಣ ಪತ್ರವನ್ನು ತೋರಿಸುವ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.
ಜೂನ್ನಲ್ಲಿ ನಡೆದಿದ್ದ ವಿಂಬಲ್ಡನ್ ಟೂರ್ನ್ಮೆಂಟ್ನಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಇದೀಗ ಯುಎಸ್ ಓಪನ್ನಲ್ಲಿ ಸಂಪೂರ್ಣವಾಗಿ ಸ್ಟೇಡಿಯಂ ತುಂಬಾ ಪ್ರೇಕ್ಷಕರು ಕುಳಿತು ಟೆನ್ನಿಸ್ ಹಬ್ಬವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇನ್ನು ಆಟಗಾರರು ಕೂಡ ಕೋವಿಡ್ ಲಸಿಕೆಯನ್ನು ಪೂರ್ಣಗೊಳಿಸಿರಬೇಕೆಂಬ ಯಾವುದೇ ನಿಯಮವಿಲ್ಲ. ಅವರು ನಗರಕ್ಕೆ ಆಗಮಿಸುತ್ತಿದ್ದಂತೆ ಕೋವಿಡ್ 19 ಪರೀಕ್ಷೆಗೆ ಒಳಗಾಗಲಿದ್ದಾರೆ. ಪ್ರತಿ 4 ದಿನಗಳಿಗೊಮ್ಮೆ ಪರೀಕ್ಷೆ ನಡೆಯಲಿದೆ. ಒಂದು ವೇಳೆ, ಪಾಸಿಟಿವ್ ಬಂದರೆ ಅವರು ಟೂರ್ನಿಯಿಂದ ಹೊರಹಾಕುವುದರ ಜೊತೆಗೆ 10 ದಿನಗಳ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ.
ಇದನ್ನು ಓದಿ:Tokyo Paralympics: ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅನ್ನು ಸೋಲಿಸಿದ ಭಾವಿನಾ ಪಟೇಲ್