ಸಿಡ್ನಿ: ಆಸ್ಟ್ರೇಲಿಯಾ ಟೆನ್ನಿಸ್ ದಂತಕತೆ ಹಾಗೂ ನಾಲ್ಕು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ವಿಜೇತ ಆಶ್ಲೇ ಕೂಪರ್ ಶುಕ್ರವಾರ ನಿಧನರಾಗಿದ್ದಾರೆ.
83 ವಯಸ್ಸಿನ ಮಾಜಿ ನಂಬರ್ ಒನ್ ಆಟಗಾರ ಕೂಪರ್ ದೀರ್ಘ ಕಾಲದಿಂದ ಖಾಯಿಲೆಯಿಂದ ಬಳಲುತ್ತಿದ್ದು, ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಕೂಪರ್ 1957ರಲ್ಲಿ ಅಮೇರಿಕಾ ವಿರುದ್ಧ ನಡೆದ ಡೇವೀಸ್ ಕಪ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನಂತರದ ವರ್ಷದಲ್ಲಿ ಅದೇ ತಂಡದ ವಿರುದ್ಧ ಸೋಲನುಭವಿಸಿದ್ದರಿಂದ ಮನನೊಂದು ಟೆನ್ನಿಸ್ ವೃತ್ತಿ ಬದುಕಿನಿಂದ ಹೊರ ಬಂದಿದ್ದರು.
1950ರ ದಶಕದಲ್ಲಿ ಟೆನ್ನಿಸ್ ಜಗತ್ತನ್ನು ಆಳಿದ್ದ ಆಶ್ಲೇ ಕೂಪರ್ 4 ಸಿಂಗಲ್ಸ್ ಹಾಗೂ 4 ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಇನ್ನು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಆಸ್ಟ್ರೇಲಿಯಾ, ಯುಎಸ್ಎ, ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು. ಫ್ರೆಂಚ್ ಓಪನ್ನಲ್ಲೂ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಒಂದೇ ವರ್ಷದಲ್ಲಿ ಮೂರು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದ 11 ಜನರ ಹೆಸರಿನಲ್ಲಿ ಕೂಪ್ ಕೂಡ ಒಬ್ಬರಾಗಿದ್ದಾರೆ.
ಕೂಪರ್ ಅವರ ಸಾವಿಗೆ ಆಸ್ಟ್ರೇಲಿಯಾ ಟೆನ್ನಿಸ್ ಸ್ಟಾರ್ಗಳಾದ ಲೇವರ್ ರೋಟ್, ಕೆನ್ ರೋಸ್ವಾಲ್, ಫ್ರಾಂಕ್ ಸೆಡ್ಗಾಮ್ , ಲೆವ್ ಹೋಡ್ ಸಂತಾಪ ಸೂಚಿಸಿದ್ದಾರೆ.