ವೃತ್ತಿಪರ ಕುಸ್ತಿಪಟು ಮತ್ತು WWE (ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ಸ್ಟಾರ್ ಜಾನ್ ಸೆನಾ ಅವರು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ (ಪತ್ನಿ) ಜಿಲ್ ಬೈಡನ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ಫೋಟೋವೊಂದನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಪುಳಕಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ.
ಭಾರತ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಬಹಳ ಜನಪ್ರಿಯರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಯುಎಸ್ ಅಧ್ಯಕ್ಷರು, ಎಲೋನ್ ಮಸ್ಕ್ ಸೇರಿದಂತೆ ಇತರೆ ಅನೇಕ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಮೋದಿ ಭಾಷಣ ಕೇಳಲು ಅಮೆರಿಕ ಮಾತ್ರವಲ್ಲದೇ, ಬೇರೆ ದೇಶದಿಂದ ಜನರೂ ಆಗಮಿಸಿದ್ದರು. ಇದೀಗ, ಮೋದಿ ಜನಪ್ರಿಯತೆಗೆ ಸಾಕ್ಷಿ ಎಂಬಂತೆ ಪ್ರಸಿದ್ಧ ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸೆನಾ ಫೋಟೋ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಏನಿದೆ?: ಜಾನ್ ಸೆನಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಪ್ರಧಾನಿ ಮೋದಿ ತಮ್ಮ ಅಂಗೈಯನ್ನು ತೋರಿಸುತ್ತಿದ್ದಾರೆ. ಇದು ಸೆನಾ ಅವರ ಸಿಗ್ನೇಚರ್ ಸ್ಟೈಲ್ ಅನ್ನೇ ಹೋಲುವಂತಿದೆ. ಹೌದು, ಬೈಡನ್ ದಂಪತಿಯೊಂದಿಗಿನ ಸಂಭಾಷಣೆಯ ಸಮಯದಲ್ಲಿ ಪಿಎಂ ಮೋದಿ ಅಂಗೈಯನ್ನು ತಮ್ಮ ಮುಖದ ಮುಂದೆ ತೋರಿಸುತ್ತಿದ್ದಾರೆ. ಈ ಫೋಟೋವನ್ನು ಜಾನ್ ಸೆನಾ ಯಾವುದೇ ಶೀರ್ಷಿಕೆ ನೀಡಿದೆ ಹಂಚಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ತಮಾಷೆಯ ಕಾಮೆಂಟ್‌ಗಳ ಮೂಲಕ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು 'ಮೋದಿ ಜಿ ಸೇನಾ ಅವರ ಅಭಿಮಾನಿ' ಎಂದು ಹೇಳಿದ್ರೆ, ಇನ್ನೊಬ್ಬ ಬಳಕೆದಾರರು, 'ನಾನು ಈ ಫೋಟೋದಲ್ಲಿ ಜೋ ಬೈಡನ್ ಮತ್ತು ಮತ್ತು ಜಿಲ್ ಅವರನ್ನು ಮಾತ್ರ ನೋಡಬಲ್ಲೆ' ಎಂದು ಬರೆದಿದ್ದಾರೆ.
ಜೂನ್ 21ರಿಂದ 24 ರ ವರೆಗೆ ಅಮೆರಿಕ ಪ್ರವಾಸದಲ್ಲಿದ್ದ ಮೋದಿ ಜೂನ್ 21ರಂದು ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೂನ್ 22ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಿದ್ದರು. ಅಂದು ಸಂಜೆಯೇ ಶ್ವೇತಭವನದಲ್ಲಿ ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರು ನರೇಂದ್ರ ಮೋದಿ ಅವರಿಗಾಗಿ ವಿಶೇಷ ಔತಣಕೂಟ ಆಯೋಜಿಸಿದ್ದರು. ಈ ವೇಳೆ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ, ಆ್ಯಪಲ್ ಸಿಇಒ ಟಿಮ್ ಕುಕ್, ಗೂಗಲ್ ಸಿಇಒ ಸುಂದರ್ ಪಿಚೈ ಮುಂತಾದವರು ಭಾಗವಹಿಸಿದ್ದರು. ಬಳಿಕ, ಅದೇ ದಿನ ಅಮೆರಿಕ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು.
ಇದನ್ನೂ ಓದಿ : ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು ಸೇರಿ 400 ಅತಿಥಿಗಳು ಭಾಗಿ